ಅರಕಲಗೂಡಿನಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ದಸರಾ ಉತ್ಸವದಲ್ಲಿ ದೇವಾನು ದೇವತೆಗಳು, ಸ್ತಬ್ಧಚಿತ್ರಗಳ ಸಾಲು ಜನಮನ ಆಕರ್ಷಿಸಿತು.  
ಜಿಲ್ಲೆ

ಜನಮನ ಸೂರೆಗೊಂಡ ಅರಕಲಗೂಡು ದಸರಾ

ಅಭಿನಯ್ ಎಚ್.ಎಂ

ಅರಕಲಗೂಡು: ಪಟ್ಟಣದಲ್ಲಿ ಗುರುವಾರ ರಾತ್ರಿ ದೇವಾನುದೇವತೆಗಳ ಸಾಲು ಉತ್ಸವದೊಂದಿಗೆ ವೈಭವಯುತವಾಗಿ ಸಾಗಿದ ಅರಕಲಗೂಡು ದಸರಾ ಮೆರವಣಿಗೆ ಜನಮನ ರಂಜಿಸಿತು.

ವಿದ್ಯುತ್ ಬೆಳಕಿನಿಂದ ಜಗಮಗಿಸುತ್ತಿದ್ದ ಪಟ್ಟಣದಲ್ಲಿ ಬಣ್ಣದ ಲೋಕವೇ ಸೃಷ್ಟಿಯಾಗಿತ್ತು. ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಅಮೃತೇಶ್ವರಸ್ವಾಮಿ, ಉಮಾಮಹೇಶ್ವರಿ, ಗ್ರಾಮದೇವತೆ ದೊಡ್ಡಮ್ಮ ದೇವಿ ದೇವಾಲಯದಲ್ಲಿ ವಿವಿಧ ಮಠಾಧೀಶರು, ಶಾಸಕ ಎ.ಮಂಜು, ಜಿಲ್ಲಾಧಿಕಾರಿ ಲತಾಕುಮಾರಿ ಪೂಜೆ ಸಲ್ಲಿಸುವ ಮೂಲಕ ಅರಕಲಗೂಡು ದಸರಾ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳ ವೈಭವದ ಮೆರವಣಿಗೆಗೆ ಚಾಲನೆ ನೀಡಿದರು.

ಪಟ್ಟಣದ ಗ್ರಾಮದೇವತೆ ಸೇರಿದಂತೆ ವಿವಿಧ ದೇವತೆಗಳ ಉತ್ಸವ ಮೂರ್ತಿಯನ್ನು ಬಣ್ಣ ಬಣ್ಣದ ವಿದ್ಯುತ್ ಬೆಳಕಿನಿಂದ ಅಲಂಕರಿಸಿದ್ದ ವಾಹನದಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ಕೀಲು ಕುದುರೆ, ಗಾರುಡಿ ಗೊಂಬೆ, ವೀರಭದ್ರ ನೃತ್ಯ, ಮೊಬೈಲ್ ಆರ್ಕೆಸ್ಟ್ರಾ, ಡಿಜೆ ಸೌಂಡ್ಸ್ ಮುಂತಾದ ಕಲಾ ತಂಡಗಳು ಉತ್ಸವಕ್ಕೆ ಮೆರುಗು ನೀಡಿದವು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಸಂಖ್ಯೆಯ ಜನರು ಉತ್ಸಾಹಭರಿತರಾಗಿ ದಸರಾ ಉತ್ಸವದ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಯುವಕರು ಡಿಜೆ ಸೌಂಡ್ಸ್‌ನ ಮಾದಕ ಗೀತೆಗಳಿಗೆ ಕುಣಿದು ಕುಪ್ಪಳಿಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು.

ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅವರು ಕದಳಿ ಛೇದನ ನಡೆಸಿ ಉತ್ತಮ ಮಳೆ-ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಹರಸಿದರು. ಸ್ವಾಮೀಜಿಗಳು ದೇವರ ಉತ್ಸವಗಳಿಗೆ ಬನ್ನಿ ಸಮರ್ಪಣೆ ನಡೆಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ದೀಪಾ ಭಾಸ್ತಿ, ಸಾಹಿತಿಗಳನ್ನು ದಸರಾ ಉತ್ಸವಕ್ಕೆ ಕರೆಸಿ ಗೌರವ ಸಲ್ಲಿಸಿರುವುದು ನನಗೆ ಅತೀವ ಸಂತಸ ತಂದಿದೆ. ತಾಲೂಕು ಕೇಂದ್ರದಲ್ಲಿ ಅದ್ಭುತವಾಗಿ ದಸರಾ ಉತ್ಸವ ಆಚರಿಸುತ್ತಿರುವುದು ನಾಡ ಹಬ್ಬದ ಹೆಮ್ಮೆಯ ಪ್ರತೀಕವಾಗಿದೆ. ನಮ್ಮಂತಹ ಸಾಹಿತಿಗಳಿಗೆ ಮತ್ತಷ್ಟು ಹೆಚ್ಚಿನ ಪ್ರೋತ್ಸಾಹ ಅತ್ಯಗತ್ಯವಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸೇವೆ ಸಲ್ಲಿಸಲು ಪ್ರೇರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಶಾಸಕ ಎ.ಮಂಜು ಮಾತನಾಡಿ, ಪಟ್ಟಣದಲ್ಲಿ ನಡೆಯುವ ಧಾರ್ಮಿಕ ದಸರಾವನ್ನು 18 ಕೋಮಿನ ಜನತೆ ಭಿನ್ನ ಬೇಧಗಳಿಲ್ಲದೆ ಒಟ್ಟಾಗಿ ಆಚರಿಸುತ್ತಿದ್ದಾರೆ. 25 ವರ್ಷಗಳ ಹಿಂದೆ ಮರುಚಾಲನೆ ದೊರೆತ ಬಳಿಕ ದಸರಾ ಉತ್ಸವ ಪ್ರತಿವರ್ಷ ವಿಭಿನ್ನ ರೀತಿಯಲ್ಲಿ ಸಂಭ್ರಮ ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ಅರಕಲಗೂಡು ದಸರಾ ಉತ್ಸವ ಜಿಲ್ಲೆಯಲ್ಲೇ ಹೆಚ್ಚು ಪ್ರಸಿದ್ಧಿಗೆ ಪಾತ್ರವಾಗಿದ್ದು ಇತಿಹಾಸ ಮರುಳಿಸುವಷ್ಟರ ಮಟ್ಟಿಗೆ ಆಚರಿಸುತ್ತಿರುದು ಹರ್ಷದಾಯಕವಾಗಿದೆ ಎಂದರು.

ಗ್ರೇಡ್- 2 ತಹಸೀಲ್ದಾರ್ ಸಿ.ಸ್ವಾಮಿ, ಹಾಸನ ಆದಿಚುಂಚನಗಿರಿ ಮಠದ ಶ್ರೀಶಂಭುನಾಥ ಸ್ವಾಮೀಜಿ, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅರೇಮಾದನಹಳ್ಳಿ ಮಠದ ಶ್ರೀ ಶಿವಸ್ಮಜ್ಞಾನ ತೀರ್ಥ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಮುಂತಾದ ಗಣ್ಯರು ಇದ್ದರು.