ಜಿಲ್ಲೆ

ಕೃಷಿ ವಿಜ್ಞಾನದಿಂದ ಸಮರ್ಥ ಬದುಕು ಸಾಧ್ಯ

ಅರಕಲಗೂಡು: ಕೃಷಿ ವಿಜ್ಞಾನದ ಮೂಲಕ ಬದುಕು ಸಾಗಿಸಿದರೆ ನಾವೆಲ್ಲ ಸಮರ್ಥರಾಗಲು ಸಾಧ್ಯ ಎಂದು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಕೋಟೆಯಲ್ಲಿರುವ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಪಶುಪಾಲನಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿಯನ್ನೇ ಜಗತ್ತು ಅವಲಂಭಿಸಿಕೊಂಡಿದೆ. ಹಾಗಾಗಿ ಧೈರ್ಯವಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಭೂಮಿಯಲ್ಲಿ ನಾವು ಎಷ್ಟು ಬೆಳೆಯುತ್ತೇವೆ ಎಂಬುದರ ಮೇಲೆ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.

ಯಂತ್ರೋಪಕರಣ ತಂದು ದೊಡ್ಡ ಕಾರ್ಖಾನೆಗಳನ್ನು ಆರಂಭಿಸಬಹುದು. ಆದರೆ ಒಂದು ರಾಗಿಯ ಕಾಳನ್ನು ಉತ್ಪಾದಿಸುವ ಯಂತ್ರ ಇದಿಯಾ? ಎಲ್ಲ ಜೀವರಾಶಿಗಳು ತಿನ್ನುವುದು ಭೂಮಿಯಲ್ಲಿ ಬೆಳೆದದ್ದನ್ನು ಮಾತ್ರ. ಇಂದು ನಾವೆಲ್ಲ ಹಿಂದಿನ ಕೃಷಿ ಪದ್ಧತಿಯನ್ನು ಮರೆತ್ತಿದ್ದೇವೆ. ಹಿಂದೆ ಹಸುಗಳಿಂದ ಭೂಮಿ ಉಳುಮೆ ಮಾಡುತ್ತಿದ್ದರು. ಹೊಲದ ಕಳೆಯನ್ನು ಕೀಳುತ್ತಿದ್ದರು. ಈ ವೇಳೆ ಭೂಮಿಯಲ್ಲಿನ ಎರೆಹುಳುಗಳು ಕಳೆಯನ್ನು ತಿಂದು ಗೊಬ್ಬರವನ್ನಾಗಿ ಮಾಡುತ್ತಿದ್ದವು. ಆದರೆ ಇಂದು ಕಳೆನಾಶಕ ಸಿಂಪಡಿಸಿ ಭೂಮಿಯನ್ನು ನಾಶಮಾಡಲಾಗುತ್ತಿದ್ದು, ಎರೆಹುಳು ಇಲ್ಲವಾಗಿವೆ ಎಂದು ಆತಂಕತ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಅಮೃತೇಶ್ವರ ದೇವಾಲಯದ ಆವರಣದಿಂದ ಹೊರಟ ಎತ್ತಿನಗಾಡಿ ಮೆರವಣಿಗೆ ಮುಖ್ಯರಸ್ತೆ ಮೂಲಕ ಅನಕೃ ವೃತ್ತ ತಲುಪಿ ಅದೇ ಮಾರ್ಗದಲ್ಲಿ ವಾಪಸ್ ಬಂದು ದೇವಸ್ಥಾನ ತಲುಪಿತು. ಪ್ರಗತಿಪರ ಕೃಷಿಕ ಎಂ.ಟಿ. ಕೃಷ್ಣೇಗೌಡ, ಪಪಂ ಸದಸ್ಯರಾದ ಕೃಷ್ಣಯ್ಯ, ರಶ್ಮಿ, ಹೂವಣ್ಣ, ರೈತ ಸಂಘದ ಮುಖಂಡರಾದ ಹೊಂಬೇಗೌಡ, ಕೃಷ್ಣೇಗೌಡ, ರಾಮೇಗೌಡ, ಪ್ರಗತಿಪರ ರೈತ ಮಹಿಳೆ ಕಮಲಮ್ಮ, ಸಹಾಯ ಕೃಷಿ ನಿರ್ದೇಶಕ ರಮೇಶ್ ಕುಮಾರ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಿ. ರಾಜೇಶ್ ಇತರರಿದ್ದರು.