ಅರಕಲಗೂಡು: ಭೂಮಿಯ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಮಾನವ ಸೇರಿದಂತೆ ಎಲ್ಲ ಜೀವರಾಶಿ ನಾಶವಾಗಲಿದೆ ಎಂದು ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ಎಚ್ಚರಿಸಿದರು.
ದಸರಾ ಉತ್ಸವದ ಅಂಗವಾಗಿ ಪಟ್ಟಣದ ಕೋಟೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಭೂಮಿ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವರಾಶಿಗೆ ವಾಸಿಸಲು ಯೋಗ್ಯ ಸ್ಥಳ ಭೂಮಿ. ಇಂತಹ ಮತ್ತೊಂದು ತಾಣ ಈವರೆಗೂ ಕಂಡುಬಂದಿಲ್ಲ. ಇದನ್ನು ಅರಿಯದೆ ಮನುಷ್ಯ ಭೂಮಿ ಹಾಗೂ ಪರಿಸರದ ಮೇಲೆ ನಡೆಸುತ್ತಿರುವ ನಿರಂತರ ಅತ್ಯಾಚಾರದ ಫಲವಾಗಿ ಇಂದು ಭೂಮಿಯ ಒಡಲು ವಿಷಮಯವಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.
ಗೋವು ಹಾಗೂ ಜೇನುನೊಣಗಳ ಸಂತತಿ ಅಳಿದರೆ ಮಾನವ ಸಂತತಿಯೂ ಅಳಿದಂತೆ. ಈಗಲಾದರೂ ಎಚ್ಚೆತ್ತು ಭೂಮಿಯನ್ನು ರಕ್ಷಸಿಕೊಳ್ಳಬೇಕು. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿ ಮಾಡುತ್ತಿದ್ದರೆ, ಮದ್ಯ ಮನುಷ್ಯನ ಬದುಕನ್ನು ಹಾಳುಗೆಡವುತ್ತಿದೆ. ಹಾಗಾಗಿ ಇದನ್ನು ನಿಷೇಧಿಸುವ ಕುರಿತು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಭೂಮಿಯನ್ನು ಕಲುಷಿತಗೊಳಿಸುತ್ತಿರುವ ಪರಿಣಾಮ ಜನರು ತೀವ್ರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಹಾರ ಉತ್ಪಾದನೆಯಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳಿಂದ ಮಧುಮೇಹ, ರಕ್ತದೊತ್ತಡ ಹಾಗೂ ಕ್ಯಾನ್ಸರ್‌ನಂತಹ ಕಾಯಿಲೆಗಳು ವ್ಯಾಪಕವಾಗಿ ಹೆಚ್ಚುತ್ತಿದೆ. ಹೀಗಾಗಿ ಉತ್ತಮ ಪರಿಸರ ಹಾಗೂ ಒಳ್ಳೆಯ ಜೀವನಶೈಲಿಯನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಲೂಕು ಕಚೇರಿ ಶಿರಸ್ತೇದಾರ್ ಸಿ.ಸ್ವಾಮಿ, ತಾಪಂ ಇಒ ಡಿ.ಡಿ. ಪ್ರಕಾಶ್ ಮಾತನಾಡಿದರು. ಪಪಂ ಸದಸ್ಯರಾದ ಕೃಷ್ಣಯ್ಯ, ಹೂವಣ್ಣ, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ, ಬಿಇಒ ದೇವರಾಜ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ರಾಜೇಶ್, ಕಂದಾಯ ನಿರೀಕ್ಷಕ ಲೋಕೇಶ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಾಂತರಾಜ್ ಇತರರಿದ್ದರು. 25 ಜನರಿಗೆ ಅಂಗವಿಕಲ ವಿಧವಾ ವೃದ್ಧಾಪ್ಯ ವೇತನದ ಮಂಜೂರಾತಿ ಪತ್ರ ವಿತರಿಸಲಾಯಿತು.