ಜಿಲ್ಲೆ

ಜ.26ರಂದು ಎಪಿಎಸ್ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ: ಸೂಪರ್ ಸ್ಟಾರ್ ರಜನಿಕಾಂತ್ ಯಾವಾಗ ಬರ್ತಾರೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಹೆಸರಾಂತ ವಿಜ್ಞಾನಿಗಳಾದ ಸಿಎನ್‌ಆರ್ ರಾವ್, ರೊದ್ದಂ ನರಸಿಂಹ, ಚಿತ್ರನಟ ರಜನೀಕಾಂತ್ ಸೇರಿ ಹಲವು ಗಣ್ಯರು ವ್ಯಾಸಂಗ ಮಾಡಿರುವ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯ (ಎಪಿಎಸ್) ‘ಹಳೆಯ ವಿದ್ಯಾರ್ಥಿಗಳ ಸಮ್ಮಿಲನ’ ಕಾರ್ಯಕ್ರಮವನ್ನು ಜ.26ರಂದು ನಡೆಯುತ್ತಿದೆ.

ಈ ಕುರಿತು ಬುಧವಾರ ಆಡಳಿತ ಮಂಡಳಿಯು ಎನ್.ಆರ್. ಕಾಲನಿಯಲ್ಲಿರುವ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನು ಹಂಚಿಕೊಂಡಿತು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ. ವಿಷ್ಣು ಭರತ್ ಆಲಂಪಲ್ಲಿ, 1935ರಲ್ಲಿ ಆರಂಭಗೊಂಡ ಸಂಸ್ಥೆಗೆ 90 ವರ್ಷ ತುಂಬಿದೆ. ಶತಮಾನೋತ್ಸವ ಕಾರ್ಯಕ್ರಮವನ್ನು ಈಗಿನಿಂದಲೇ ಆರಂಭ ಮಾಡಲಾಗುತ್ತದೆ. ಇಡೀ ದಶಕ ಸಂಭ್ರಮಿಸಲಾಗುತ್ತದೆ ಎಂದರು.

ಇದರ ಅಂಗವಾಗಿ ಮೊದಲ ಅಲ್ಯುಮ್ನಿ ಮೀಟ್ ಅನ್ನು ಜ.26ರಂದು ಸಂಜೆ 4 ಗಂಟೆಯಂದ ಆರಂಭವಾಗಲಿದೆ. ಅಂದು ಸಂಜೆ 6 ಗಂಟೆಗೆ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಹಿರಿಯ ವಿದ್ಯಾರ್ಥಿಗಳು 9 ಗಂಟೆಯವರೆಗೆ ತಮ್ಮ ಗಾಯನದ ಮೂಲಕ ರಂಜಿಸಲಿದ್ದಾರೆ ಎಂದು ಹೇಳಿದರು.

ಡಿ.28ರವರೆಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗಿತ್ತು. 4 ಸಾವಿರಕ್ಕೂ ಹೆಚ್ಚಿನ ಹಿರಿಯ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಪ್ರತಿ ದಿನ ಸಾವಿರಾರು ಕರೆಗಳು ತಾವು ಕೂಡ ಬರುವುದಾಗಿ ಹಿರಿಯ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ ಎಂದರು.

ರಜನಿಕಾಂತ್ ಮತ್ತು ಉಪೇಂದ್ರ ಅವರು ಸಿನಿಮಾ ಶೂಟಿಂಗ್‌ಗಾಗಿ ವಿದೇಶಗಳಿಗೆ ತೆರಳಿದ್ದು, 2ನೇ ಅಲ್ಯುಮ್ನಿ ನೀಟ್‌ನಲ್ಲಿ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ. ಅದನ್ನು ಸೋಮನಹಳ್ಳಿ ಶಾಖೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಆಜೀವ ಟ್ರಸ್ಟಿ ಪ್ರೊ. ಎ.ಪಿ. ಆಚಾರ್ಯ ಮತ್ತು ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಸೇರಿ ಹಲವರು ಉಪಸ್ಥಿತರಿದ್ದರು.

9 ದಶಕಗಳ ಸಾರ್ಥಕ ಸೇವೆ ಸಲ್ಲಿಸಿದ ಎಪಿಎಸ್

ಪ್ರೊ. ಎನ್. ಅನಂತಾಚಾರ್ ಅವರು 1935ರಲ್ಲಿ ಮೂರು ವಿದ್ಯಾರ್ಥಿಗಳಿಂದ ಸಂಸ್ಥೆಯನ್ನು ಆರಂಭಿಸಿದರು. ಇಂದು ಕೆಜಿಯಿಂದ ಪಿಜಿವರೆಗೂ ಎಲ್ಲ ರೀತಿಯ ಶಿಕ್ಷಣವನ್ನು ನೀಡುತ್ತಿದೆ. ಎಪಿಎಸ್ ವ್ಯಾಪ್ತಿಯಲ್ಲಿ ವಿವಿಧ 14 ಸಂಸ್ಥೆಗಳು ಸೇವೆ ಸಲ್ಲಿಸುತ್ತಿದ್ದು, 600ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಶಿಕ್ಷಣ ಪಡೆದವರು ರಾಜಕೀಯ ಕ್ಷೇತ್ರ, ಇಂಜಿನಿಯರಿಂಗ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.