ಚಿಕ್ಕಮಗಳೂರು: ಅಮೃತ್ ಯೋಜನೆಗೆ ಏಪ್ರಿಲ್ ಮೊದಲ ವಾರದಲ್ಲಿ ಚಾಲನೆ ದೊರೆಯಲಿದೆ ಎಂದು ನಗರಸಭೆ ಆಯುಕ್ತ ಬಿ.ಎನ್.ಚಂದ್ರಶೇಖರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೆ 16 ಸಾವಿರ ಮನೆಗಳಿಗೆ ಹೊಸದಾಗಿ ಪೈಪ್ಲೈನ್ ಅಳವಡಿಸಲಾಗಿದೆ. ಯೋಜನೆ ಕಾರ್ಯಗತವಾಗುವವರೆಗೂ ಹಳೆಯ ಪೈಪ್ಲೈನ್ನಲ್ಲೇ ನೀರು ನೀಡಲಾಗುವುದು. ಈ ವರ್ಷ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದು ಎಂದರು.
ನಗರಸಭೆಗೆ 2000 ರೂ. ಶುಲ್ಕ ಪಾವತಿಸಿ ನೀರಿನ ಸಂಪರ್ಕ ಪಡೆದಿರುವ ನಾಗರಿಕರಿಗೆ ಯೋಜನೆಯಡಿ ಮೀಟರ್ ಅಳವಡಿಸುವ ಕೆಲಸ ಆರಂಭವಾಗಿದೆ. ಶುಲ್ಕ ನೀಡದೆ ಸಾರ್ವಜನಿಕ ನಲ್ಲಿಗಳಲ್ಲಿ ನೀರು ಪಡೆಯುತ್ತಿರುವವರು ನಗರಸಭೆಗೆ ಶುಲ್ಕ ಪಾವತಿಸಿದರೆ ಅವರ ಮನೆಗಳಿಗೂ ನೀರಿನ ಸಂಪರ್ಕ ಕಲ್ಪಿಸಿ ಮೀಟರ್ ಅಳವಡಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಮೀಟರ್ ಅಳವಡಿಸಿದರೆ ಹೆಚ್ಚು ಶುಲ್ಕ ಬೀಳುತ್ತದೆ ಎನ್ನುವ ಕಲ್ಪನೆ ತಪ್ಪ್ಪು. ಮೀಟರ್ ಅಳವಡಿಸುವುದರಿಂದ ನೀರಿನ ಮಿತ ಬಳಕೆ ಆಗುವುದಲ್ಲದೆ ಬಿಲ್ ಸಹ ಕಡಿಮೆ ಬರುತ್ತದೆ. ಐವರಿರುವ ಒಂದು ಮನೆಗೆ ಒಂದು ಮೀಟರ್ ಅಳವಡಿಸಿದರೆ ಸಾಕಾಗುತ್ತದೆ. ಅದಕ್ಕಿಂತ ಹೆಚ್ಚಿದ್ದು, ನೀರಿನ ಬಳಕೆ ಹೆಚ್ಚಿದ್ದರೆ ಅಂಥವರಿಗೆ ಎರಡು ಮೀಟರ್ ಅಳವಡಿಸಲು ಅವಕಾಶವಿದೆ ಎಂದು ಹೇಳಿದರು.
ಮೀಟರ್ ಅಳವಡಿಸಿದ ಬಳಿಕ ನೀರು ಬಳಕೆದಾರರಿಗೆ ಟೆಲಿಸ್ಕೋಪ್ ಬಿಲ್ಲಿಂಗ್ ವ್ಯವಸ್ಥೆ ಇದೆ. ಏರು ಪ್ರಮಾಣದಲ್ಲಿ ಬಿಲ್ ಮಾಡಲಾಗುತ್ತದೆ. ಸೀಮಿತ ಬಳಕೆ ಉಚಿತವಾಗಿರುತ್ತದೆ. ಅದಕ್ಕಿಂತ ಹೆಚ್ಚು ಬಳಸಿದರೆ ಬಿಲ್ ಬರುತ್ತದೆ. ನೀರಿನ ಬಳಕೆ ಹೆಚ್ಚಾದಂತೆ ಬಿಲ್ ಸಹ ಹೆಚ್ಚುತ್ತ ಹೋಗುತ್ತದೆ ಎಂದು ಮಾಹಿತಿ ನೀಡಿದರು.
ಎರಡು ಮೀಟರ್ ಮತ್ತು ಸಂಪರ್ಕ ಅಗತ್ಯವಿದ್ದವರು ಈಗಲೇ ಅಳವಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಈಗ ಫ್ಯೂಜನ್ ತಂತ್ರಜ್ಞಾನದಲ್ಲಿ ಅಳವಡಿಸಲಾಗುತ್ತದೆ. ಮುಂದೆ ಸಂಪರ್ಕ ಪಡೆಯಬೇಕೆಂದರೆ ದುಬಾರಿಯಾಗಲಿದೆ. ಸ್ಥಳೀಯ ಪ್ಲಂಬರ್ಗಳಿಂದ ಈ ಕೆಲಸ ಮಾಡಲು ಸಾಧ್ಯವಾಗದು. ಈ ಕಾರಣಕ್ಕೆ ಅಕ್ರಮ ಸಂಪರ್ಕ ಪಡೆಯುವುದು ಸಹ ಕಷ್ಟ ಸಾಧ್ಯ ಎಂದು ಹೇಳಿದರು.
ಪ್ರತಿ ಮನುಷ್ಯನಿಗೆ ಪ್ರತಿದಿನ 135 ಲೀ. ನೀರು ಕೊಡಬೇಕು ಎನ್ನುವುದು ಸರ್ಕಾರದ ತೀರ್ವನ. ನಾವು ಹಿಂದೆ ತೀರ್ಥಹಳ್ಳಿಯಲ್ಲಿ ಈ ಯೋಜನೆ ಜಾರಿಗೆ ತಂದಿದ್ದೇವೆ. ಅಲ್ಲಿ ಕೇವಲ 80 ರೂ.ನಲ್ಲಿ ಅಗತ್ಯವಿರುವಷ್ಟು ನೀರು ಬಳಸಿಕೊಂಡಿದ್ದಾರೆ. ತಿಪಟೂರಿನಲ್ಲೂ ಮೀಟರ್ ವ್ಯವಸ್ಥೆ ಯಶಸ್ವಿಯಾಗಿದೆ. ಆರಂಭದಲ್ಲಿ ಮನೆ ಮನೆ ಸಂಪರ್ಕ ಹಾಗೂ ಮೀಟರ್ ಅಳವಡಿಕೆಯಲ್ಲಿ ಸಮಸ್ಯೆ ಕಾಣಿಸಬಹುದು. ಆದರೆ ಅದನ್ನು ಸರಿಪಡಿಸಲು ಅವಕಾಶವಿದೆ ಎಂದರು.
ಒಳಚರಂಡಿ ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೆ ನಗರದ ರಸ್ತೆಗಳ ದುರಸ್ತಿ ಆಗಲಿದೆ ಎಂದು ತಿಳಿಸಿದ ಅವರು, ಈಗಾಗಲೇ ಒಳಚರಂಡಿಗೆ ಪೈಪ್ಲೈನ್ ಅಳವಡಿಸಿರುವ ಕಡೆ ಮನೆಗಳಿಗೆ ಸಂಪರ್ಕ ಪಡೆಯಬೇಕು. ಆ ನಂತರವಷ್ಟೇ ರಸ್ತೆ ಕೆಲಸ ಮಾಡಲಾಗುವುದು. ಇಲ್ಲವಾದಲ್ಲಿ ಮತ್ತೆ ಮತ್ತೆ ರಸ್ತೆಗಳನ್ನು ಅಗೆಯಬೇಕಾಗುತ್ತದೆ ಎಂದು ಹೇಳಿದರು.
ಈ ಹಿಂದೆ ನಗರಕ್ಕೆ ಅಗತ್ಯವಿರುವಷ್ಟು ನೀರು ಯಗಚಿಯಿಂದ ಒಂದೇ ಬಾರಿಗೆ ಪಂಪ್ ಆಗುತ್ತಿರಲಿಲ್ಲ. ಈ ಕಾರಣಕ್ಕೆ ಒಂದು ಬಡಾವಣೆಗೆ ನೀರು ಹರಿಸಿ ನಂತರ ಮತ್ತೊಂದು ಬಡಾವಣೆಗೆ ನೀರು ಕೊಡಬೇಕಿತ್ತು. ಆದರೆ ಈಗ ಯಗಚಿ ಜಾಕ್ವೆಲ್, ಮುಗಳವಳ್ಳಿ ಪಂಪ್ ಹೌಸ್ನಲ್ಲಿ 350 ಎಚ್ಪಿ ಮೋಟಾರ್ ಬದಲಿಗೆ 650 ಎಚ್ಪಿ ಮೋಟಾರ್ ಅಳವಡಿಸಲಾಗಿದೆ ಎಂದು ಚಂದ್ರಶೇಖರ್ ತಿಳಿಸಿದರು. ಇದಕ್ಕೆ ಅನುಗುಣವಾಗಿ ಹೆಚ್ಚು ವ್ಯಾಸದ ಪೈಪ್ಗಳನ್ನು ಹೊಸದಾಗಿ ಜೋಡಿಸಲಾಗಿದೆ. ನಗರದ ಹೌಸಿಂಗ್ ಬೋರ್ಡ್ನಲ್ಲಿರುವ ನೀರು ಶುದ್ಧೀಕರಣ ಘಟಕವನ್ನು ಉನ್ನತೀಕರಿಸಿ 60 ಲಕ್ಷ ಲೀ. ಸಾಮರ್ಥ್ಯದ ನೆಲಮಟ್ಟದ ನೀರು ಸಂಗ್ರಹಾಗಾರ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.