ತಾಲೂಕಿನ ಪುರಾಣ ಪ್ರಸಿದ್ಧ ದೊಡ್ಡಮಳೂರು ಗ್ರಾಮದ ಅಪ್ರಮೇಯಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ರಥವನ್ನು ಎಳೆದು, ರಥಕ್ಕೆ ಹೂವು-ಹಣ್ಣು, ಜವನ ಎಸೆದು ಪುನೀತರಾದರು. ರಥೋತ್ಸವದ ಹಿನ್ನೆಲೆಯಲ್ಲಿ ಅಪ್ರಮೇಯನ ಸನ್ನಿದ್ದಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸ್ವಾಮಿಗೆ ವಿಶೇಷ ಆಲಂಕಾರ ಮಾಡಲಾಗಿತ್ತು. ರಥೋತ್ಸವದಂದು ನೇರವಾಗಿ ಸೂರ್ಯರಶ್ಮಿ ಸ್ವಾಮಿಯ ಪಾದಗಳ ಮೇಲೆ ಬೀಳುವ ಅಚ್ಚರಿ ನಡೆಯುವುದು ಇಲ್ಲಿನ ವಿಶೇಷವಾಗಿದೆ. ಕೇವಲ ತಾಲೂಕು ಅಷ್ಟೇ ಅಲ್ಲದೇ, ರಾಜ್ಯದ ನಾನಾ ಭಾಗದ ಭಕ್ತರು ಈ ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿಭಾವ ಮೆರೆದರು. ಬಣ್ಣದ ಬಟ್ಟೆ ಹಾಗೂ ಹೂಗಳಿಂದ ಅಲಂಕರಿಸಿದ ರಥವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಳೆಯಲಾಯಿತು. ಈ ಬಾರಿ ಜಾತ್ರೆಯೂ ಸಹ ಕಳೆಗಟ್ಟಿತ್ತು.
ಪುರಾಣಪ್ರಸಿದ್ದ ಕ್ಷೇತ್ರ;
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಿಗುವ ದೊಡ್ಡಮಳೂರು ಗ್ರ್ರಾಮದಲ್ಲಿ ನೆಲೆಸಿರುವ ಅಪ್ರಮೇಯಸ್ವಾಮಿ ದೇವಾಲಯಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ರಥೋತ್ಸವದಂದು ಸೂರ್ಯರಶ್ಮಿ ನೇರವಾಗಿ ಸ್ವಾಮಿಯ ಪಾದಗಳ ಮೇಲೆ ಬೀಳುವುದು ಇಲ್ಲಿನ ವಿಶೇಷ. ಇನ್ನು ಈ ದೇವಾಲಯವನ್ನು ತಳಪಾಯವಿಲ್ಲದೆ ಕೇವಲ ಮರಳಿನ ಮೇಲೆ ಕಲ್ಲುಗಳಿಂದ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಅನೇಕ ದ್ವಾರಗಳು, ಧ್ವಜಸ್ಥಂಭ, ಗರುಢಗಂಭವಿದೆ. ಶ್ರೀಕೃಷ್ಣ ಸಹಸ್ರ ನಾಮದಲ್ಲಿ ಅಪ್ರಮೇಯ ಎಂಬುದು ಒಂದು ನಾಮವಾಗಿದ್ದು, ಶ್ರೀ ಅಪ್ರಮೇಯಸ್ವಾಮಿ ನೆಲಸಿರುವ ಏಕೈಕ ಕ್ಷೇತ್ರ ಇದಾಗಿದೆ. ಇಲ್ಲಿನ ಅಂಬೆಗಾಲು ಶ್ರೀಕೃಷ್ಣ ಸಹ ಸಾಕಷ್ಟು ಪ್ರಸಿದ್ದಿ ಪಡೆದಿದೆ.