ವಿಜಯವಾಣಿ ಸುದ್ದಿಜಾಲ ಉಡುಪಿ
ಲಕ್ಷಾಂತರ ಕನ್ನಡಿಗರ ಹೃದಯ ಗೆದ್ದ ನಟ ಪುನೀತ್ ರಾಜಕುಮಾರ್ ಕಾಣದಂತೆ ಮಾಯವಾದರೂ ಸಹ ಅವರ ಮೇಲಿರುವ ಅಭಿಮಾನ ಇನ್ನೂ ಮಾಯವಾಗಿಲ್ಲ. ಅವರ ಅಭಿಮಾನಿಗಳಿಗೆ ಅಪ್ಪು ಅವರನ್ನು ಮರೆಯಲಾಗುತ್ತಿಲ್ಲ.
ಹಾವೇರಿಯಲ್ಲಿ ಪುನೀತ್ ರಾಜಕುಮಾರ್ ಅವರ 50ನೇ ಜನ್ಮದಿನೋತ್ಸವ ಆಚರಿಸಲಾಗುತ್ತಿದೆ ಎಂಬ ಸುದ್ದಿ ತಿಳಿದ ಉಡುಪಿಯ ಗರಡಿಮಜಲಿನ ಆಟೋ ಚಾಲಕ ಕನ್ನಡ ನಾಗರಾಜ್ ಅವರು ಭಾನುವಾರ ತಮ್ಮ ಆಟೋದಲ್ಲಿ ಹಾವೇರಿಯತ್ತ ಪಯಣ ಬೆಳೆಸಿದ್ದಾರೆ.
ಕನ್ನಡ ನಾಗರಾಜ್ ಅವರು ಅಪ್ಪು ಅವರ ಅಭಿಮಾನಿಯಾಗಿದ್ದು ತನ್ನ ಆಟೋವನ್ನು ಸಂಪೂರ್ಣ ಅಪ್ಪು ಚಿತ್ರದಿಂದಲೇ ಅಲಂಕರಿಸಿದ್ದಾರೆ. ಕನ್ನಡದ ಬಾವುಟಗಳಿಂದ ಮತ್ತು ಅಪ್ಪು ಅವರ ವಿವಿಧ ಪೋಸ್ಟರ್ ಅಳವಡಿಸಿದ್ದಾರೆ ಆಟೋಕ್ಕೆ ಭುವನೇಶ್ವರಿ ಎಂದು ಹೆಸರಿಟ್ಟಿರುವ ಅವರು, ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು ಲಗತ್ತಿಸಿದ್ದಾರೆ. ಹಳದಿ-ಕೆಂಪು ಬಣ್ಣದ ಅಂಗಿ ತೊಟ್ಟು ಆಟೋದಲ್ಲಿ ಹಾವೇರಿಗೆ ತೆರಳಿದ್ದಾರೆ.
ಎಲ್ಲರೂ ಕನ್ನಡವನ್ನು ಬೆಳೆಸಬೇಕು ಕನ್ನಡವನ್ನು ಉಳಿಸಬೇಕು ಎನ್ನುತ್ತಾರೆ ಆದರೆ ಆಟೋ ಚಾಲಕ ಕನ್ನಡ ನಾಗರಾಜ್ ಅವರು ನಿತ್ಯವೂ ಕನ್ನಡವನ್ನು ಪ್ರೀತಿಸುತ್ತಾರೆ, ಕನ್ನಡವನ್ನೇ ಉಸಿರಾಡುತ್ತಾರೆ. ಅವರ ಕನ್ನಡ ಅಭಿಮಾನ ಮತ್ತು ಅಪ್ಪು ಮೇಲಿನ ಅಭಿಮಾನ ಮಾದರಿಯಾಗಿದೆ. ಎಂದು ಸುಧೀರ್ ಶೆಟ್ಟಿ ಹಿರಿಯಡ್ಕ ಮತ್ತು ಉಡುಪಿಯ ಡಾ.ರಾಜಕುಮಾರ್ ಅಭಿಮಾನಿ ಸಂಘದ ಕಾರ್ಯದರ್ಶಿ ಸರಳೆಬೆಟ್ಟು ಗಣೇಶ್ ರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡವೆಂದರೆ ಮತ್ತು ನಟ ಅಪ್ಪು ಎಂದರೆ ನನಗೆ ಎಲ್ಲಿಲ್ಲದ ಅಭಿಮಾನ. ಅವರು ನಿಧನರಾಗಿದ್ದರು ಸಹ ನನ್ನ ಮನಸ್ಸಿನಲ್ಲಿ ಅವರು ಅಮರರಾಗಿದ್ದಾರೆ. ಹಾವೇರಿಯಲ್ಲಿ ಅವರ ಪುತ್ಥಳಿ ನಿರ್ಮಿಸಲಾಗುತ್ತಿದ್ದು ಉಡುಪಿಯಲ್ಲಿಯೂ ಅಪ್ಪು ಪುತ್ಥಳಿ ನಿರ್ಮಿಸಬೇಕೆನ್ನುವುದು ನನ್ನ ಕನಸಾಗಿದೆ. ಇದಕ್ಕೆ ಜಿಲ್ಲೆಯ ಕನ್ನಡಿಗರು ಕೈಜೋಡಿಸುತ್ತಾರೆ ಎಂಬ ನಂಬಿಕೆ ಇದೆ. | ಕನ್ನಡ ನಾಗರಾಜ್. ಆಟೋ ಚಾಲಕ, ಉಡುಪಿ