ಚಿಕ್ಕಮಗಳೂರಿನ ತೊಂಗರಿಹಂಕಲ್ ವೃತ್ತದ ಜೈ ಭುವನೇಶ್ವರಿ ಆಟೋ ನಿಲ್ದಾಣದಲ್ಲಿ ನಟ ಪುನೀತ್‌ರಾಜ್‌ಕುಮಾರ್ ಅವರ 49ನೇ ಜನ್ಮದಿನ ಆಚರಣೆ ಮಾಡಲಾಯಿತು. ಅಮೃತೇಶ್ ಚನ್ನಕೇಶವ, ಫೈರೋಜ್, ಉದಯ್‌ಕುಮಾರ್, ರಾಮೇಗೌಡ, ಎಂ.ಟಿ.ಜಗದೀಶ್ ಮತ್ತಿತರರಿದ್ದರು.  
ಜಿಲ್ಲೆ

ಅಪ್ಪು ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಜರಾಮರ

ಚಿಕ್ಕಮಗಳೂರು: ಅದ್ಭುತ ನಟನೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಪುನೀತ್ ರಾಜ್‌ಕುಮಾರ್ ಇಂದಿಗೂ ನಾಡಿನ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಮೇರುನಟ ಎಂದು ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ ತಿಳಿಸಿದರು.

ನಗರದ ತೊಂಗರಿಹಂಕಲ್ ವೃತ್ತದ ಜೈ ಭುವನೇಶ್ವರಿ ಆಟೋ ನಿಲ್ದಾಣದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ 49ನೇ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಕೇಕ್ ಕತ್ತರಿಸಿ ಸಿಹಿ ಹಂಚಿ ಮಾತನಾಡಿದ ಅವರು, ಇಂದಿನ ಕ್ಷಣ ಸಂಭ್ರಮಿವುದೋ ಅಥವಾ ದುಃಖಿಸುವುದು ತಿಳಿಯದಾಗಿದೆ. ಮೇರುನಟನ ಸವಿನೆನಪು ಮರೆಯಲಾಗುತ್ತಿಲ್ಲ. ಹೀಗಾಗಿ ಪುನೀತ್ ತೋರಿದ ಮಾರ್ಗದರ್ಶನ ಹಾಗೂ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಮಾತ್ರ ಅವರ ಜನ್ಮದಿನ ಆಚರಣೆಗೆ ಒಂದು ಅರ್ಥಬರುತ್ತದೆ ಎಂದು ಹೇಳಿದರು.
ನಟನೆಯ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ತಂದೆ ಡಾ.ರಾಜ್‌ಕುಮಾರ್ ಕನ್ನಡ ನಾಡಿನ ಕುಲದೇವರಾಗಿದ್ದರೂ ಯಾವುದೇ ಅಹಂ ಪುನೀತ್‌ಗೆ ಇರಲಿಲ್ಲ. ದುಡಿಮೆಯ ಇಂತಿಷ್ಟು ಹಣವನ್ನು ಸಮಾಜದಲ್ಲಿ ನೊಂದ ಹೆಣ್ಣು ಮಕ್ಕಳ ಜೀವನಕ್ಕೆ ಮುಡಿಪಿಟ್ಟವರು ಎಂದು ಬಣ್ಣಿಸಿದರು.
ಪುನೀತ್ ರಾಜ್‌ಕುಮಾರ್‌ಗೂ ಚಿಕ್ಕಮಗಳೂರಿಗೂ ಅವಿಭಾವ ಸಂಬಂಧವಿದೆ. ಅವರ ಧರ್ಮಪತ್ನಿ ಇದೇ ಜಿಲ್ಲೆಯವರಾದ ಹಿನ್ನೆಲೆಯಲ್ಲಿ ಸ್ಥಳೀಯ ಜನತೆಯಲ್ಲಿ ವಿಶೇಷ ಅಭಿಮಾನವಿದೆ. ಆ ನಿಟ್ಟಿನಲ್ಲಿ ನಗರದ ಹಲವಾರು ಕಡೆಗಳಲ್ಲಿ ನಟ ಪುನೀತ್ ರಾಜ್‌ಕುಮಾರ್ ಹೆಸರನ್ನು ರಸ್ತೆಗಳಿಗೆ ನಾಮಕರಣ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕ ಫೈರೋಜ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಗುಮುಖದ ಒಡೆಯ ಪುನೀತ್ ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಲಾಗುತ್ತಿದೆ. ಆಟೋ ಚಾಲಕರ ಬದುಕಿನಲ್ಲಿ ಇಂದಿಗೂ ಪುನೀತ್ ಜೀವಂತವಾಗಿದ್ದಾರೆ. ಅವರ ಮೌಲ್ಯಯುತ ಸಾಧನೆಗಳು ನಮ್ಮಗೆಲ್ಲ ದಾರಿದೀಪ ಎಂದರು.
ವರ್ಷದಲ್ಲಿ ಎರಡು ಮೂರು ಬಾರಿ ಆಟೋದಲ್ಲೇ ಬೆಂಗಳೂರಿಗೆ ತೆರಳುವ ಮೂಲಕ ಮೇರುನಟ ನೆಲೆಸಿರುವ ಸ್ಥಳಕ್ಕೆ ಗೌರವ ಸೂಚಿಸಲಾಗುತ್ತಿದೆ. ಸಿನಿಮಾ ಜಗತ್ತಿನಲ್ಲಿ ಸಮಾಜಕ್ಕೆ ಕೊಡುಗೆ ನೀಡುವಂತಹ ಚಿತ್ರಗಳನ್ನು ನಿರ್ಮಿಸಿ ರಂಜಿಸುವ ಕೆಲಸ ಮಾಡಿದ ಪುನೀತ್, ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಸಮಾಜದಲ್ಲಿ ಬಾಳಿದವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಟೋ ಸಂಘದ ಅಧ್ಯಕ್ಷ ಉದಯ್‌ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಮಾಜಿ ಅಧ್ಯಕ್ಷ ಎಂ.ಟಿ.ಜಗದೀಶ್, ಚಾಲಕರಾದ ದೇವರಾಜ್, ಕುಮಾರ್, ಚಂದ್ರು, ತಿರುಪಾಲ್ ಮತ್ತಿತರರಿದ್ದರು.