ಕೋಲಾರ: ಕಳೆದ 2024ರ ಶಿಕ್ಷಕರ ದಿನದಂದು ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಪ್ರಾಥಮಿಕ ಶಾಲಾ ಸೇವಾ ನಿರತ ಪದವೀಧರ ಶಿಕ್ಷಕರಿಗೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕಡತಕ್ಕೆ ತಕ್ಷಣ ಅನುಮೋದನೆ ನೀಡಲು ಆಗ್ರಹಿಸಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಶಾಖೆಯಿಂದ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ನಾಗರಾಜ್ ಮಾತನಾಡಿ, ಕಳೆದ 2024ರ ಸೆ.4ರಂದು ಮುಖ್ಯಮಂತ್ರಿಗಳ ಶಿಕ್ಷಣ ಸಚಿವರ ನೇತೃತ್ವದಲ್ಲಿ ಸುಧೀರ್ಘ ಸಭೆ ನಡೆಸಿ, ಒಂದು ಸಮಿತಿ ರಚಿಸುವ ಮೂಲಕ 30 ದಿನಗಳಲ್ಲಿ ವರದಿ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಸ್ಪಷ್ಟ ಭರವಸೆ ನೀಡಿದ್ದು, ಇಲ್ಲಿಯವರೆಗೂ ಆ ಭರವಸೆ ಈಡೇರದಿರುವುದರಿಂದ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂಬಂಧ ಈಗಾಗಲೇ 2 ಬಾರಿ ಕಾನೂನು ಇಲಾಖೆ ಸ್ಪಷ್ಟ ಅಭಿಪ್ರಾಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೂ ಅಭಿಪ್ರಾಯ ಮಂಡಿಸಿದೆ, ಇನ್ನು ಆರ್ಥಿಕ ಇಲಾಖೆ ಪ್ರತಿಕ್ರಿಯೆ ನೀಡಬೇಕಿದ್ದು, ತಕ್ಷಣ ಮುಖ್ಯಮಂತ್ರಿಗಳು ಸದರಿ ಇಲಾಖೆಯಿಂದ ಅಭಿಪ್ರಾಯ ಪಡೆದು, ಸಚಿವ ಸಂಪುಟದ ಅನುಮೋದನೆ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2025ರ ಆ.25ರೊಳಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಅಪ್ಪಯ್ಯಗೌಡ ಸೇರಿ ಎಲ್ಲ ಪದಾಧಿಕಾರಿಗಳು ಜಿಲ್ಲಾಧಿಕಾರಿ, ಜಿಪಂ ಸಿಇಒ, ಡಿಡಿಪಿಐಗೆ ಮನವಿ ಸಲ್ಲಿಸಲಾಯಿತು.