ಸುಳ್ಯ: ಸುಳ್ಯ ಯೋಜನಾ ಪ್ರಾಧಿಕಾರ ಮತ್ತು ಸುಳ್ಯ ತಾಲೂಕು ಪಂಚಾಯಿತಿ ವತಿಯಿಂದ ಸುಳ್ಯ ತಾಲೂಕು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜಂಟಿ ಸಭೆ ನಡೆಯಿತು.
ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವಿಷಯ ಪ್ರಸ್ತಾವನೆಗೈದು, ಸುಳ್ಯ ತಾಲೂಕಿನಲ್ಲಿ 9/11 ವಿನ್ಯಾಸ ಅನುಮೋದನೆ, ಕಟ್ಟಡ ಪರವಾನಗಿ, ಕನ್ವರ್ಷನ್ ಮೊದಲಾದ ಕಡತ ವಿಲೇವಾರಿಗೆ ಪ್ರಥಮ ಹಂತದಲ್ಲಿ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳ ಸಭೆ ಕರೆಯಲಾಗಿದೆ. ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಸಾರ್ವಜನಿಕರ ಕೆಲಸಗಳು ತ್ವರಿತವಾಗಿ ನಡೆಯುತ್ತವೆ. 9/11 ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಇಂತಹ ಸಭೆಗಳು ಅವಶ್ಯಕ ಎಂದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫ ಅಧ್ಯಕ್ಷತೆ ವಹಿಸಿ, ಸುಳ್ಯ ತಾಲೂಕಿನಲ್ಲಿ ಈವರೆಗೆ 415 ಕಡತಗಳು ಸ್ವೀಕೃತಗೊಂಡಿದ್ದು, 232 ಕಡತಗಳಿಗೆ ಅನುಮೋದನೆ ನೀಡಲಾಗಿದೆ. ಗ್ರಾಮ ಪಂಚಾಯಿತಿಯಿಂದ ಸಮರ್ಪಕ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಪ್ರಾಧಿಕಾರದಲ್ಲಿ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ 9/11 ಕಡತಗಳ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವಾಗ ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಟೌನ್ ಪ್ಲಾನರ್ ಫೈರೋಜ್ ಮಾಹಿತಿ ನೀಡಿದರು. ಸಂಪರ್ಕ ರಸ್ತೆ, ವಿನ್ಯಾಸ ನಕ್ಷೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಪ್ರಾಧಿಕಾರದ ಸದಸ್ಯ- ಕಾರ್ಯದರ್ಶಿ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕಿ ಸ್ವಾತಿ ಎನ್.ಸ್ವಾಮಿ ಸಭೆಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಂದಿಸಿದರು.