ಮದ್ದೂರು: ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲೂ ಎ ಮತ್ತು ಬಿ ಖಾತೆ ವಿಶೇಷ ಅಭಿಯಾನ ಮಾಡಲು ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಕೋಕಿಲಾ ಅರುಣ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ವಿಶೇಷ ಅಭಿಯಾನಕ್ಕೆ ಸದಸ್ಯರು ಒಪ್ಪಿದರು.
ಎ ಮತ್ತು ಬಿ ಖಾತೆ ಅಭಿಯಾನ ಮಾಡುವ ಮೂಲಕ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ನೋಂದಣಿ ಮಾಡಲು ಸದಸ್ಯರು ಅಗತ್ಯ ಸಹಕಾರ ನೀಡಬೇಕು ಎಂದು ಕಂದಾಯ ಅಧಿಕಾರಿ ಪುಟ್ಟಸ್ವಾಮಿ ಸಭೆಯಲ್ಲಿ ಮನವಿ ಮಾಡಿದರು.
ಸದಸ್ಯ ಮನೋಜ್ ಮಾತನಾಡಿ, ಬಿ ಖಾತೆಗೆ ಬರುವ ಅರ್ಜಿಗಳನ್ನು ಸಕಾಲದಲ್ಲಿ ಎಂಟ್ರಿ ಮಾಡಿ 7 ದಿನದೊಳಗೆ ಮುಗಿಸಬೇಕು. ಸಾರ್ವಜನಿಕರನ್ನು ಅನಗತ್ಯವಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂದರು.
ಕಂದಾಯ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, 2014ರ ಸೆ.10 ರ ಹಿಂದೆ ತೆಗೆದುಕೊಂಡಿರುವ ಆಸ್ತಿ ಮತ್ತು ಗಡಿಯನ್ನು ಗುರುತಿಸಲಾಗಿದ್ದು, ಅದರೊಳಗೆ ಪ್ರಾಧಿಕಾರದಿಂದ ಅನುಮೋದನೆ ಪಡೆಯದ, ಆರ್‌ಟಿಸಿ ಹೊಂದಿರುವ ಆಸ್ತಿಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದು. ರಸ್ತೆ ಇತರ ವಿಷಯಗಳನ್ನು ಗಮನಿಸಿ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಲೆಕ್ಕಚಾರ ಮಾಡಿ ಬಿ ಖಾತೆ ನೀಡಲಾಗುವುದು ಎಂದು ಸಭೆಗೆ ತಿಳಿಸಿದರು.
ಸಭೆ ಹಾಗೂ ಸದಸ್ಯರ ಗಮನಕ್ಕೆ ತಾರದೆ ಟೆಂಡರ್ ಕರೆದಿರುವುದಕ್ಕೆ ಸದಸ್ಯ ಎಂ.ಐ.ಪ್ರವೀಣ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ಟೆಂಡರ್ ಕೆರೆಯಲು 60,000 ರೂ.ಖರ್ಚಾಗುತ್ತದೆ. ಅಧಿಕಾರಿಗಳು ಸಾಮಾನ್ಯ ಸಭೆಗೆ ಮಾಹಿತಿ ನೀಡದೆ ಬೇಕಾಬಿಟ್ಟಿ ಟೆಂಡರ್‌ಗಳನ್ನು ಕರೆಯುವುದು ಮತ್ತು ಕ್ಯಾನ್ಸಲ್ ಮಾಡುವ ಮೂಲಕ ಸಾರ್ವಜನಿಕ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಕಾಮಗಾರಿ ಹೆಸರಿನಲ್ಲಿ ಮೂಲ ಸೌಕರ್ಯಗಳಿಗೆ ಧಕ್ಕೆ ತರುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸದಸ್ಯ ನಂದೀಶ್ ಸಭೆಯ ಗಮನಕ್ಕೆ ತಂದರು. ಕಾಮಗಾರಿ ನಡೆಯುವ ಸಂದರ್ಭದಲ್ಲಿ 21, 22 ಮತ್ತು 23ನೇ ವಾರ್ಡ್‌ಗೆ ನೀರು ಸರಬರಾಜಾಗುವ ಪೈಪ್ ಅನ್ನು ಹಾಳು ಮಾಡಿದ್ದು ಮೂರರಿಂದ ನಾಲ್ಕು ದಿನ ಈ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಿಲ್ಲ ಇದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದರು.
ಇದಕ್ಕೆ ದನಿಗೂಡಿಸಿದ ಎಂ.ಐ.ಪ್ರವೀಣ್, ಯಾವುದೇ ಕಾಮಗಾರಿ ನಡೆಯಬೇಕಿದ್ದರೆ ಸ್ಥಳೀಯ ಪುರಸಭೆಯಿಂದ ಎನ್‌ಒಸಿ ಪಡೆಯಬೇಕು. ಇದಕ್ಕೆ ಸಂಬಂಧಿಸಿದಂತೆ ನಿಗದಿತ ಹಣವನ್ನು ಪುರಸಭೆಗೆ ನೀಡಬೇಕು. ಇಂತಹ ಯಾವುದೇ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
ಶಿವಪುರಕ್ಕೆ ನೀರು ಸರಬರಾಜಗುವ ಪೈಪ್‌ಲೈನ್ ಮೇಲೆ ಬಿ.ಎಂ. ರಸ್ತೆ ಗುತ್ತಿಗೆದಾರರು ಚರಂಡಿ ನಿರ್ಮಾಣ ಮಾಡಿದ್ದು ದುರಸ್ತಿ ಮಾಡಲು ತೊಂದರೆಯಾಗುತ್ತಿದೆ. ಈ ಸಂಬಂಧ ಶಿವಪುರಕ್ಕೆ ಸರಬಜಾಗುವ ಕುಡಿಯುವ ನೀರಿನ ಪೈಪ್ ಅನ್ನು ಚರಂಡಿ ಕೆಳಗಿಂದ ಪ್ರತ್ಯೇಕಗೊಳಿಸಬೇಕು ಪ್ರವೀಣ್ ಆಗ್ರಹಿಸಿದರು.
ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಕಂದಾಯ ವಸೂಲಾತಿ ಮಾಡುತ್ತಿಲ್ಲ. ಕಂದಾಯ ಕಟ್ಟಲು ಸಾರ್ವಜನಿಕರು ಪುರಸಭೆಗೆ ಬಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಮುಂದೆ ಈ ರೀತಿಯಾಗದಂತೆ ಅಧಿಕಾರಿಗಳು ಕ್ರಮವಹಿಬೇಕೆಂದು ಎಂ.ಬಿ.ಸಚಿನ್ ಸಭೆಗೆ ತಿಳಿಸಿದರು.
ಪುರಸಭಾ ಉಪಾಧ್ಯಕ್ಷ ಟಿ.ಅರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಪ್ರಭಾರ ಮುಖ್ಯಾಧಿಕಾರಿ ಎಂ.ಶ್ರೀಧರ್, ಸದಸ್ಯರಾದ ಎಸ್.ಮಹೇಶ್. ಪ್ರಿಯಾಂಕಾ ಅಪ್ಪುಗೌಡ, ಶೋಭಾರಾಣಿ, ಸುರೇಶ್‌ಕುಮಾರ್, ಸುಮಿತ್ರ ರಮೇಶ್, ಶೋಭಾ, ಬಸವರಾಜು, ಎಂ.ಬಿ.ಸಚಿನ್. ರತ್ನತಿಮ್ಮಯ್ಯ, ಕಮಲ್‌ನಾಥ್, ಸಿದ್ದರಾಜು, ಲತಾರಾಮು ಇದ್ದರು.