ದಾಂಡೇಲಿ: ನಗರದ ಅಗತ್ಯಕ್ಕೆ ಅನುಗುಣವಾಗಿ ಹಾಗೂ ಮುಂದಿನ 30 ವರ್ಷಗಳ ಜನಸಂಖ್ಯೆಯನ್ನು ಪರಿಗಣಿಸಿ ಕುಡಿಯುವ ನೀರು ಸರಬರಾಜು ಮಾಡಲು ಅಮೃತ್ 2.0 ಅನುದಾನದ ಅಡಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಯೋಜನೆಯ ನಿಯಮಾವಳಿ ಅನ್ವಯ ನಗರದಲ್ಲಿ ಹಾಗೂ ನಗರದ ಸುತ್ತಲಿನ ಸುಮಾರು 121 ಕಿ.ಮೀ ವ್ಯಾಪ್ತಿಯಲ್ಲಿ ನೂತನ ಕೊಳವೆ ಮಾರ್ಗ ನಿರ್ಮಿಸುವುದು, ಜಲಸಂಗ್ರಹಗಾರ ನಿರ್ಮಾಣ, 9000 ಗೃಹ ಸಂಪರ್ಕ, ಆನ್‌ಲೈನ್ ಮಾನಿಟರಿಂಗ್ ವ್ಯವಸ್ಥೆ ಜತೆಗೆ ಘಟಕಗಳ ಮತ್ತು ಕಾಮಗಾರಿಗಳ 5 ವರ್ಷಗಳ ಕಾರ್ಯಾಚರಣೆ, ನಿರ್ವಹಣೆ ಯೋಜನೆಯ ಉದ್ದೇಶವಾಗಿದೆ.
ಹೊಸ ಯೋಜನೆಯಿಂದ ನಗರದ ಜನತೆಗೆ ಪ್ರತಿದಿನ 135 ಲೀ. ಶುದ್ಧ ಕುಡಿಯುವ ನೀರು ಒದಗಿಸಬಹುದಾಗಿದೆ. ಯೋಜನೆಯ ಕಾಮಗಾರಿಗಳನ್ನು ಪ್ಯಾಕೇಜ್ ಟೆಂಡರ್ ಆಧಾರದ ಮೇಲೆ ಧಾರವಾಡದ ಸುಪ್ರದಾ ಕನ್ಸ್‌ಸ್ಟ್ರಕ್ಷನ್ಸ್‌ಗೆ ವಹಿಸಲಾಗಿದ್ದು, 24 ತಿಂಗಳು ಕಾಲಾವಧಿ ನಿಗದಿಪಡಿಸಲಾಗಿದೆ. ಈಗಾಗಲೇ ಅಂಬೇವಾಡಿ ಮತ್ತು ಗಣೇಶನಗರ ಭಾಗದಲ್ಲಿ ಸುಮಾರು 5 ಕಿ.ಮೀ ಪೈಪ್‌ಲೈನ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ.