ಶಿಗ್ಗಾಂವಿ: ಕಳೆದ ಒಂದೂವರೆ ವರ್ಷದ ಕಾಂಗ್ರೆಸ್ನ ದುರಾಡಳಿತ ಮತ್ತು ದೌರ್ಜನ್ಯಕ್ಕೆ ಉಪ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ಕೊಡುತ್ತಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳು ಕೈ ಹಿಡಿಯುತ್ತವೆ ಎಂದು ಕಾಂಗ್ರೆಸ್ನವರು ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಹಾವೇರಿ-ಗದಗ ಜಿಲ್ಲೆಯ ಕಡೆಗೆ ಹೆಚ್ಚಿನ ಗಮನಹರಿಸಿದ್ದೆ. ಆಗ ಸ್ವಲ್ಪ ವ್ಯತ್ಯಾಸವಾಗಿದೆ. ಆದರೆ, ನಮ್ಮ ಕಾರ್ಯಕರ್ತರಿಗೆ ಈಗಾಗಲೇ ಅದರ ಅರಿವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ರೀತಿ ಜನರು ಬೆಂಬಲ ಕೊಟ್ಟಿದ್ದರೋ, ಅದೇ ರೀತಿ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲ ಸಮುದಾಯದವರು ನಮಗೆ ಬೆಂಬಲ ಸೂಚಿಸಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ನನಗಿಂತ ಹೆಚ್ಚು ಬೆಂಬಲ ಭರತ್ ಬೊಮ್ಮಾಯಿಗೆ ಸಿಗಲಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜೀಮ್ೕರ್ ಖಾದ್ರಿಯವರ ಮನವೊಲಿಕೆಯಿಂದ ನಮಗೇನು ಪರಿಣಾಮ ಬೀರುವುದಿಲ್ಲ. ಅದು ಕಾಂಗ್ರೆಸ್ಗೆ ಸಂಬಂಧಿಸಿದ ವಿಚಾರ ಎಂದರು.
ಕಾಂಗ್ರೆಸ್ ಟಿಕೆಟ್ ರೌಡಿಶೀಟರ್ಗೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ನವರೇ ಆರೋಪ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟೀಕರಣ ನೀಡಬೇಕು ಎಂದ ಬೊಮ್ಮಾಯಿ, ಕಾಂಗ್ರೆಸ್ನವರು ಹೋಬಳಿಗೊಬ್ಬ ಸಚಿವರು ಬಂದರೆ ಸ್ವಾಗತ ಎಂದು ಉತ್ತರಿಸಿದರು.