ಆನೇಕಲ್: ಜನರ ಪರವಾದ ಬಜೆಟ್ ಮಂಡನೆ ಮಾಡಲು ಜನರೇ ತೀರ್ಮಾನ ಮಾಡಬೇಕು ಎನ್ನುವುದು ನಮ್ಮ ಆದ್ಯತೆಯಾಗಿದೆ ಎಂದು ಪುರಸಭಾ ಅಧ್ಯಕ್ಷೆ ಸುಧಾ ನಿರಂಜನ್ ಹೇಳಿದರು.
ಪುರಸಭಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,
ಪಟ್ಟಣದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಸಭೆಯಲ್ಲಿ ಸ್ಥಳೀಯ ಪತ್ರಕರ್ತರು ತಿಳಿಸಿದ್ದಾರೆ. ಪುರಸಭೆಯಿಂದ ಸಮಸ್ಯೆ ಬಗೆಹರಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಕ್ಕದಲ್ಲಿ ಎರಡು ಎಕರೆ ಪ್ರದೇಶದಲ್ಲಿ ವಾಹನ ನಿಲ್ಲಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂದರು.
ಪಟ್ಟಣದಲ್ಲಿ ಹಲವು ಅಂಗನವಾಡಿ ಕಟ್ಟಡಗಳು ಬಾಡಿಗೆಯಲ್ಲಿ ಇವೆ, ಅವುಗಳನ್ನು ಕೆಲವು ಬಡಾವಣೆಗಳಲ್ಲಿ ಇರುವ ಸಿ ಎ ಸೈಟ್ ಬಳಸಿಕೊಂಡು ಸರ್ಕಾರಿ ಕಟ್ಟಡದಲ್ಲಿ ಅಂಗನವಾಡಿ ನಿರ್ಮಿಸಿದರೆ ಅನುಕೂಲ ಎಂಬ ಸಲಹೆ ಬಂದಿದ್ದು, ಶೀಘ್ರದಲ್ಲೇ ಈ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದರು.
ಬೀದಿಬದಿ ವ್ಯಾಪಾರಿಗಳು ರಸ್ತೆಯಲ್ಲಿ ಗಾಡಿ ನಿಲ್ಲಿಸಿಕೊಳ್ಳುವುದು, ಸಾರ್ವಜನಿಕರಿಗೆ ತೊಂದರೆ ಮಾಡುವುದನ್ನು ಸರಿಪಡಿಸಲು ಚರ್ಚಿಸಲಾಗಿದೆ. ಪಟ್ಟಣದ ರಸ್ತೆಯ ಅಕ್ಕಪಕ್ಕದಲ್ಲಿ ದಿನಕ್ಕೊಂದು ಭಾಗದಲ್ಲಿ ವಾಹನಗಳನ್ನು ನಿಲ್ಲಿಸಬೇಕು ಎನ್ನುವ ಮನವಿ ಕೂಡ ಬಂದಿದ್ದು, ಪೊಲೀಸರ ಜತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಸದಸ್ಯರಾದ ಸುರೇಶ್ ಬಾಬು, ಸುರೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು, ಸಾಹಿತ್ಯ ಪರಿಷತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಪಟ್ಟಣದ ಪತ್ರಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಪಟ್ಟಣದ ರಸ್ತೆಯ ಅಕ್ಕಪಕ್ಕದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು ಹಾಗೂ ಪ್ರಮುಖವಾಗಿ ಪಟ್ಟಣದಲ್ಲಿ ಉತ್ತಮವಾದ ರಂಗಮಂಟಪದ ಅವಶ್ಯಕತೆ ಇದ್ದು, ಹೀಗಾಗಿ ಬಜೆಟ್‌ನಲ್ಲಿ ಘೋಷಿಸಬೇಕು. ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಆಹಾರ ನೀಡುತ್ತಿದ್ದು, ಕಡಿವಾಣ ಹಾಕಬೇಕು,
ಆದರೂ ಪ್ರಕಾಶ್, ಸಾಹಿತ್ಯ ಪರಿಷತ್ ಅಧ್ಯಕ್ಷ
ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳು ರಸ್ತೆಯಲ್ಲಿ ಟ್ರಾಫಿಕ್ ಆಗದಂತೆ ವಾಹನಗಳನ್ನು ನಿಲ್ಲಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಸಾಕಷ್ಟು ತಲೆದೋರಿದ್ದು, ಇದಕ್ಕೆ ಪೊಲೀಸರ ಜತೆ ಚರ್ಚಿಸಿ ಕ್ರಮ ಆಗಬೇಕು.
ಅಮರೇಶ್
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ
ಸ್ವಾಗತ ಕಮಾನು ಬೇಕು :ಆನೇಕಲ್ ಪಟ್ಟಣಕ್ಕೆ ತಮಿಳುನಾಡಿನಿಂದ ಬರುವ ಪ್ರಮುಖ ಗುಡ್ಡನಹಳ್ಳಿ ಹಾಗೂ ಸೋಲೂರು ಭಾಗದ ರಸ್ತೆಯಲ್ಲಿ ಸ್ವಾಗತ ಕಮಾನು ನಿರ್ಮಾಣ ಆಗುವುದರಿಂದ ರಾಗಿಯ ಕಣಜ ಎನ್ನುವ ಹೆಸರು ನಿರಂತರವಾಗಿ ಆನೇಕಲ್ ತಾಲೂಕಿಗೆ ಬರುವವರಿಗೆ ಗೊತ್ತಾಗಲಿದೆ. ಸ್ವಾಗತ ಕಮಾನು ನಿರ್ಮಾಣ ಮಾಡಲು ಸ್ಥಳೀಯವಾಗಿ ವರಮಾನದ ಕೊರತೆ ಇದ್ದರೆ, ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಗಳಿಂದ ಸಿಎಸ್‌ಆರ್ ಯೋಜನೆ ಮೂಲಕ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ವಿಜಯವಾಣಿ ಕಳಕಳಿ