ಜಿಲ್ಲೆ

ಮೈಸೂರು ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಆತಂಕ

ಮೈಸೂರು: ಕಾಲರಾ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿವೆ. ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥಗೊಂಡಿರುವ ಕೆ.ಸಾಲುಂಡಿ ಗ್ರಾಮದಲ್ಲಿ ಕಾಲರಾ ಭೀತಿ ಎದುರಾಗಿದ್ದು, ಯುವಕನೊಬ್ಬ ಕಾಲರಾದಿಂದ ಮೃತಪಟ್ಟಿದ್ದಾನೆ. ನಂಜನಗೂಡು ತಾಲೂಕಿನ ತಗಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲುಷಿತ ನೀರು ಸೇವನೆಯಿಂದ 122 ಜನರಿಗೆ ವಾಂತಿ, ಭೇದಿ ಪ್ರಕರಣ ವರದಿಯಾಗಿದೆ.

ಜಿಲ್ಲೆಯಲ್ಲಿ 15 ದಿನಗಳಿಂದ ಉತ್ತಮ ಮಳೆಯಾಗಿದ್ದು, ಕಲುಷಿತ ನೀರು ಸೇವನೆ ಜತೆಗೆ ಸೊಳ್ಳೆ ಕಾಟದಿಂದಲೂ ಸಾಂಕ್ರಾಮಿಕ ರೋಗಗಳು ಉಲ್ಬಣಿಸುತ್ತಿವೆ. ಕಾಲರಾ ಜತೆಗೆ ಮಳೆಯಿಂದ ಕೆಮ್ಮು, ಶೀತ, ನೆಗಡಿ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ರೋಗಗಳ ಮುಖ್ಯ ಲಕ್ಷಣವೇ ಜ್ವರ. ಮಳೆ ಬಿದ್ದಾಗ ಸೊಳ್ಳೆ ಹೆಚ್ಚಾಗುವುದರಿಂದ ಡೆಂೆ, ಟೈಫಾಯ್ಡ, ವೈರಾಣು ಜ್ವರ ಇನ್ನಿತರ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ಆದರೆ, ಈ ಸಾಂಕ್ರಾಮಿಕ ರೋಗಳಿಗೆ ಆತಂಕಪಡುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆ ಮೇರೆಗೆ ಔಷಧ, ಮನೆ ಸುತ್ತಮುತ್ತ ಸ್ವಚ್ಛತೆ, ಶುದ್ಧ ನೀರು ಹಾಗೂ ಪೌಷ್ಟಿಕಾಂಶದಿಂದ ಕೂಡಿದ ಆಹಾರ ಸೇವಿಸಿದರೆ ಸಾಂಕ್ರಾಮಿಕ ರೋಗಳಿಂದ ದೂರವಾಗಬಹುದು ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಕಾಲರಾದಿಂದ ಒಂದು ಬಲಿಯಾಗಿದೆ. ಆದರೆ ಡೆಂೆ ಜ್ವರದಿಂದ ಇತ್ತೀಚೆಗೆ ಯಾವುದೇ ರೋಗಿ ಮೃತಪಟ್ಟಿಲ್ಲ. ಹೀಗಾಗಿ ಜನರು ವದಂತಿಗಳಿಗೆ ಕಿವಿಗೊಡದೆ ಜ್ವರ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯರು ಮನವಿ ಮಾಡಿದ್ದಾರೆ.

ಸಾಂಕ್ರಾಮಿಕ ರೋಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪಾಲಿಕೆ ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಕುದಿಸಿ ಆರಿಸಿದ ನೀರು ಕುಡಿಯಬೇಕು. ಬಿಸಿಯಾದ ಊಟ, ಶುದ್ಧ ಆಹಾರ ಸೇವಿಸಬೇಕು. ಫಾಸ್ಟ್‌ಫುಡ್, ಹೋಟೆಲ್ಗಳಲ್ಲಿ ಶುದ್ಧ ಆಹಾರ ಮತ್ತು ಕುಡಿಯಲು ಬಿಸಿನೀರು ನೀಡಬೇಕು. ತ್ಯಾಜ್ಯ ವಸ್ತುಗಳನ್ನು ಜನವಸತಿ ಪ್ರದೇಶದ ಹೊರಗಡೆ, ನಿಗದಿತ ಸ್ಥಳದಲ್ಲಿ ಹಾಕಬೇಕು. ಗ್ರಾಮ/ಬಡಾವಣೆ, ಮನೆಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತೆರೆದಿಟ್ಟ ತಿಂಡಿ, ತಿನಿಸುಗಳು ಮತ್ತು ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ತಿನ್ನಬಾರದು. ಊಟಕ್ಕೆ ಮೊದಲು ಹಾಗೂ ಮಲ ವಿಸರ್ಜನೆ ನಂತರ ಕೈಗಳನ್ನು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಸಾಂಕ್ರಾಮಿಕ ರೋಗಗಳ ತಡೆ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.