ಹುಣಸೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲೂಕಿನ ಎಂ.ಲೇಖನ್ ಅವರನ್ನು ದಲಿತ ಸಂಘರ್ಷ ಸಮಿತಿ ಮತ್ತು ರೈತಸಂಘದ ಸದಸ್ಯರು ಶನಿವಾರ ಅಭಿನಂದಿಸಿದರು.
ತಾಲೂಕಿನ ತಿಪ್ಪಲಾಪುರ ಗ್ರಾಮದ ನಿವಾಸಿ ಮಹದೇವು-ಶೈಲಜಾ ದಂಪತಿ ಪುತ್ರ ಎಂ.ಲೇಖನ್ ಅವರನ್ನು ಸನ್ಮಾನಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇವರ ಸಾಧನೆ ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ವಿದ್ಯಾರ್ಥಿಗಳು ಪ್ರೀತಿ, ಪ್ರೇಮದ ಕೂಪಕ್ಕೆ ಬಿದ್ದು ಮತ್ತು ದುಶ್ಚಟದ ಮಾರ್ಗವನ್ನು ಹಿಡಿದು ತಮ್ಮ ಜೀವನವನ್ನೇ ಬಲಿಕೊಡುವ ಪ್ರಕರಣ ನಡೆಯುತ್ತಿವೆ. ವಿದ್ಯಾರ್ಥಿಗಳು ಸಾಧನೆಗೈಯಲು ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಮುನ್ನಡೆಯಬೇಕು ಎಂದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಲೇಖನ್ ಅವರು ತಂದೆಯ ಅಕಾಲಿಕ ಸಾವನ್ನು ಸಹಿಸಿಕೊಂಡು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿರುವುದು ಕುಟುಂಬ ಮಾತ್ರವಲ್ಲ ನಮ್ಮ ತಾಲೂಕು ಹೆಮ್ಮೆಪಡುವ ವಿಚಾರವಾಗಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ ಮಾತನಾಡಿ, ನಗರದಲ್ಲಿ ಐಎಎಸ್, ಕೆಎಎಸ್ ಇತರ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಹುಣಸೂರಿನಲ್ಲಿ ಪ್ರಾರಂಭಿಸಬೇಕು. ಈ ತರಬೇತಿ ಕೇಂದ್ರದಲ್ಲಿ ಕನಿಷ್ಠ ಶುಲ್ಕ ನಿಗದಿ ಮಾಡಿ, ನುರಿತ ತಜ್ಞರಿಂದ ತರಬೇತಿ ಪಡೆಯಲು ಅನುಕೂಲ ಮಾಡಿಕೊಡಲು ಕ್ಷೇತ್ರದ ಶಾಸಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಆದಿಜಾಂಭವ ಸಂಘದ ಡಿ.ಕುಮಾರ್, ಬಲ್ಲೇನಹಳ್ಳಿ ಕೆಂಪರಾಜು, ಕೊಳಗಟ್ಟ ಕೃಷ್ಣ, ಪೌರಕಾರ್ಮಿಕ ಸಂಘದ ಅಧ್ಯಕ್ಷ ಮುರುಗೇಶ, ಅಲೆಮಾರಿ ಸಂಘದ ಅಂಬೇಡ್ಕರ್ ನಗರದ ಶೇಖರ್, ಹರೀಶ, ದಾಸಪ್ಪ, ಶೋಭಾ, ಹೊನ್ನಿಕುಪ್ಪೆ ರವಿ ಮಧು ಹಾಜರಿದ್ದರು.