ಕೋಲಾರ ಜಿಲ್ಲಾಡಳಿತ ಕಚೇರಿ ಮುಂಭಾಗ ಮಿಜೋರಾಂ ರಾಜ್ಯದ ಭೂ ಕಂದಾಯ ಹಾಗೂ ವಸಾಹತು ಇಲಾಖೆಯ ಸಚಿವ ಬಿ.ಲಾಲ್​ಚಿಂಸೋವ ಹಾಗೂ ಮಿಜೋರಾಂ ಸರ್ಕಾರದ ಕಾರ್ಯದರ್ಶಿ ವನ್​ಲಾಲ್​ಮಾವಿಯಾ ಅವರೊಂದಿಗೆ ಜಿಲ್ಲಾಧಿಕಾರಿ ಅಕ್ರಂಪಾಷಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​, ಅಪರ ಜಿಲ್ಲಾಧಿಕಾರಿ ಮಂಗಳಾ, ಇತರೆ ಇಲಾಖೆ ಅಧಿಕಾರಿಗಳಿದ್ದರು. 
ಜಿಲ್ಲೆ

ಕಂದಾಯ ಇಲಾಖೆ ಕಾರ್ಯ ವೈಖರಿಗೆ ಮೆಚ್ಚುಗೆ

ಮಾಹಿತಿ ಪಡೆದ ಮಿಜೋರಾಂ ಕಂದಾಯ ಸಚಿವ, ಅಧಿಕಾರಿಗಳು

ಕೋಲಾರ: ಕರ್ನಾಟಕ ಕಂದಾಯ ಸುಧಾರಣೆಗಳನ್ನು ಅಧ್ಯಯನ ಮಾಡಲು ಗುರುವಾರ ಕೋಲಾರಕ್ಕೆ ಆಗಮಿಸಿದ ಮಿಜೋರಾಂ ಭೂ ಕಂದಾಯ ಹಾಗೂ ವಸಾಹತು ಇಲಾಖೆಯ ಸಚಿವ ಬಿ.ಲಾಲ್​ಚಿಂಸೋವ ಹಾಗೂ ಮಿಜೋರಾಂ ಸರ್ಕಾರದ ಕಾರ್ಯದರ್ಶಿ ವನ್​ಲಾಲ್​ಮಾವಿಯಾ ಅವರನ್ನು

ಜಿಲ್ಲಾಧಿಕಾರಿ ಅಕ್ರಂಪಾಷಾ ಸ್ವಾಗತಿಸಿ, ಕಂದಾಯ ಇಲಾಖೆಯ ವಿವಿಧ ವಿವರಗಳ ಮಾಹಿತಿ ನೀಡಿದರು.

ಉತ್ಸುಕತೆಯಿಂದ ಪ್ರತಿಯೊಂದು ವಿವರಗಳನ್ನು ಜಿಲ್ಲಾಧಿಕಾರಿಗಳಿಂದ ಕೇಳಿದ ಅಧ್ಯಯನ ತಂಡ ಕೋಲಾರ ಜಿಲ್ಲೆಯ ಆಡಳಿತ ವೈಖರಿಯನ್ನು ಶ್ಲಾಘಿಸಿತು.

ಸಾರ್ವಜನಿಕರಿಗೆ ವಿವಿಧ ಕಂದಾಯ ಸೇವೆಗಳನ್ನು ತ್ವರಿತಗತಿಯಲ್ಲಿ ವಿತರಿಸುತ್ತಿರುವ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯ ವೃತ್ತಿಪರ ಕಾಳಜಿಯನ್ನು ಮೆಚ್ಚಿತು.

ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಅಟಲ್​ಜಿ ಜನಸ್ನೇಹಿ ಕೇಂದ್ರದಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ವಿತರಿಸಲಾಗುವ ವಿವಿಧ ಪ್ರಮಾಣ ಪತ್ರಗಳನ್ನು ವಿಳಂಬವಿಲ್ಲದೆ, ಶೇ.100 ವಿತರಿಸಿ ರಾಜ್ಯದಲ್ಲೇ ಪ್ರಥಮ  ರ್ರ್ಯಾಂಕಿಂಗ್​​ ಪಡೆಯುವ ಸಾಧನೆ ಮಾಡಿದೆ. ಈ ಸೇವೆಯಲ್ಲಿ ನಾಗರಿಕರಿಗೆ ವಿವಿಧ ಸೇವೆಗಳನ್ನು ನಾಡಕಚೇರಿ ಮೂಲಕ ಸುಲಭವಾಗಿ ತಲುಪಿಸುವ ಗುರಿ ಹೊಂದಿದೆ. ಜಾತಿ ಮತ್ತು ಆದಾಯ, ಭೂಮಿ ಮತ್ತು ಕೃಷಿಕರಿಗೆ ಸಂಬಂಧಿಸಿದ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳು, ಜಾತಿ ಆದಾಯ ಪ್ರಮಾಣ ಪತ್ರ, ಪಡಿತರ ತಿದ್ದುಪಡಿ, ಪಹಣಿ, ಮ್ಯುಟೇಷನ್​, ಆಧಾರ್​ ಅರ್ಜಿ, ತಿದ್ದುಪಡಿ ಸೇರಿ 25ಕ್ಕೂ ಹೆಚ್ಚಿನ ಸೇವೆಗಳನ್ನು ಆನ್​ಲೈನ್​ನಲ್ಲಿಯೇ ಒದಗಿಸಲಾಗುತ್ತಿದೆ. ಈ ವಿತರಣೆಗಳಲ್ಲಿ ಹಿಂದೆ 31 ಜಿಲ್ಲೆಗಳ ಪೈಕಿ 28ನೇ ಸ್ಥಾನದಲ್ಲಿದ್ದ, ಕೋಲಾರ ಜಿಲ್ಲೆಯು ಪ್ರಸ್ತುತ ಶೇ.100 ವಿಳಂಬ ರಹಿತ ಸೇವೆ ನೀಡುವ ಖಾತರಿ ಪಡಿಸಿಕೊಳ್ಳಲಾಗುತ್ತಿದೆ. ಏಳು ತಿಂಗಳಿಂದ ಸದರಿ ಸೇವೆ ಒದಗಿಸುವಲ್ಲಿ ರಾಜ್ಯಕ್ಕೆ ಕೋಲಾರ ಜಿಲ್ಲೆಯು ಮಾದರಿಯಾಗಿದೆ ಎಂದು ತಿಳಿಸಿದರು.

ಪ್ರತಿ ತಿಂಗಳು ಸಕಾಲ ಯೋಜನೆಯಡಿ ಸುಮಾರು 31 ಇಲಾಖೆಗಳ ವಿವಿಧ 75,000 ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಕ್ರಮಬದ್ಧವಾಗಿ ವಿಲೆಮಾಡಲಾಗುತ್ತಿದೆ. ಸದರಿ ಯೋಜನೆಯಡಿ ವಿಳಂಬ ಮಾಡುವ ನೌಕರರಿಗೆ ದಂಡ ವಿಧಿಸುವ ಪ್ರಕ್ರಿಯೆ ಇರುವುದರಿಂದ 21 ದಿನಗಳಲ್ಲಿ ವಿಲೆಮಾಡಲು ನಿಗದಿಪಡಿಸಿರುವ ಅರ್ಜಿಗಳನ್ನು 7 ದಿನಗಳೊಳಗೆ ವಿಲೆಮಾಡಲಾಗುತ್ತಿದೆ. ಈ ಹಿಂದೆ ಅರ್ಜಿ ವಿಲೆವಾರಿಯಲ್ಲಿ 31 ಜಿಲ್ಲೆಗಳ ಪೈಕಿ 29ನೇ ಸ್ಥಾನದಲ್ಲಿದ್ದ, ಕೋಲಾರ ಪ್ರಸ್ತುತ ಪ್ರಥಮ ಸ್ಥಾನಕ್ಕೇರಿದೆ ಎಂದರು.

ಕಂದಾಯ ದಾಖಲೆಗಳಿಗೆ ಆಧಾರ್​ ಸೀಡಿಂಗ್​ ಕಾರ್ಯಪ್ರಗತಿಯಲ್ಲಿದ್ದು, ದಾಖಲೆಗಳನ್ನು ತಿರುಚುವ ಪ್ರಕ್ರಿಯೆಗೆ ಕಡಿವಾಣ ಹಾಕಲಾಗಿದೆ. ಜಿಲ್ಲೆಯ ಶೇ.90 ಖಾಸಗಿ ಸ್ವತ್ತುಗಳ ಕಂದಾಯ ದಾಖಲೆಗಳನ್ನು ಆಧಾರ್​ ಸೀಡಿಂಗ್​ ಮಾಡಲಾಗಿದೆ. ಸರ್ಕಾರಿ ಆಸ್ತಿಗಳ ಕಾವಲಿಗಾಗಿ ಲ್ಯಾಂಡ್​ಬೀಟ್​ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿಗೆ ಅವಕಾಶ ಇಲ್ಲದಂತೆ,

ತಂತ್ರಾಂಶದಲ್ಲಿ ಸರ್ಕಾರಿ ಜಮೀನುಗಳ ದಾಖಲೆ ರಕ್ಷಿಸುವ ಜತೆಗೆ ಜಿಯೋಫೆನ್ಸ್​ ಮೂಲಕ ನಿಗಾವಹಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಕೋಲಾರ ಜಿಲ್ಲೆಯು ರಾಜ್ಯಕ್ಕೆ ಆದರ್ಶಪ್ರಾಯವಾಗಿ ಪ್ರಥಮ ಸ್ಥಾನ ಪಡೆದಿದೆ ಎಂದು ವಿವರಿಸಿದರು. ಭೂ ಸುರಾ ಯೋಜನೆಯಡಿ ಜಿಲ್ಲೆಯ ಎಲ್ಲ ರೆಕಾರ್ಡ್​ ರೂಂಗಳಲ್ಲಿರುವ ಎಲ್ಲ ದಾಖಲೆಗಳನ್ನು ಡಿಜಿಟಲಿಕರಣಗೊಳಿಸಿ

ಗಣಕೀಕರಣಗೊಳಿಸಲಾಗಿದೆ. ಇದರಿಂದಾಗಿ ಕಡತಗಳು ಕಳೆದು ಹೋಗುವ ಸಂಭವ ಕಡಿಮೆಯಿದ್ದು, ತಕ್ಷಣಕ್ಕೆ ದಾಖಲೆಗಳು ಲಭ್ಯವಾಗುವ ಸಾಧ್ಯತೆ ಇರುತ್ತದೆ ಎಂದರು.

ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ ನಿಯಮಿತವಾಗಿ ನಡೆಸಲಾಗುವ ಕಂದಾಯ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಕನಿಷ್ಠ 3 ತಿಂಗಳೊಳಗಾಗಿ ವಿಲೆಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತ್ವರಿತ ನ್ಯಾಯ ಒದಗಿಸಲು ಸಾಧ್ಯವಾಗುತ್ತಿದೆ. ಪ್ರಸ್ತುತ 1000 ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಇದರಿಂದಾಗಿ ಸಿಬ್ಬಂದಿ ಕೊರತೆ ಸ್ವಲ್ಪ ಮಟ್ಟಿಗೆ ನೀಗಿಸಿಕೊಳ್ಳಬಹುದಾಗಿದೆ. ಕಂದಾಯ ಇಲಾಖೆಯ ಎಲ್ಲ ಕಡತಗಳನ್ನು ಇ-ಆಫೀಸ್​ ತಂತ್ರಾಂಶದ ಮುಖಾಂತರ ವಿಲೆಮಾಡುತ್ತಿರುವುದರಿಂದ ವಿಳಂಬಕ್ಕೆ ಆಸ್ಪದವಿಲ್ಲದೆ, ತ್ವರಿತಗತಿಯಲ್ಲಿ ಕಡತಗಳ ವಿಲೆ ನಿರೀಸಬಹುದಾಗಿದೆ ಎಂದು ವಿವರಿಸಿದರು.