ವಿಜಯಪುರ: ಬಂಜರಾ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸ್ಥಾಪಿಸಿದ ಬಂಜಾರಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಕ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗಿದೆ. ಮೊದಲಿನಿಂದಲೂ ಈ ಭಾಗದ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಕೂಡಲೇ ಎಚ್ಚೆತ್ತುಕೊಂಡು ಉತ್ತರ ಕರ್ನಾಟಕ ಭಾಗದ ನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಬಂಜಾರಾ ಸಮುದಾಯದ ನಾಯಕರು ಒಕ್ಕೋರಲಿನಿಂದ ಆಗ್ರಹಿಸಿದರು.
ರಾಜ್ಯದ ತಾಂಡಾ ಅಭಿವೃದ್ಧಿ ನಿಗಮ ಉದ್ಘಾಟನೆಗೊಂಡಾಗಿನಿಂದ ಈವರೆಗೆ ವಿಜಯಪುರ ಜಿಲ್ಲೆಯವರಿಗೆ ಯಾವುದೇ ಅವಕಾಶ ಸಿಕ್ಕಿಲ್ಲ. ರಾಜ್ಯದಲ್ಲಿಯೇ ಕಲಬುರಗಿ ಮತ್ತು ವಿಜಯಪುರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರಾ ಸಮುದಾಯದವರಿದ್ದಾರೆ. ವಿಜಯಪುರ ಜಿಲ್ಲೆಯೊಂದರಲ್ಲಿಯೇ 500ಕ್ಕೂ ಅಧಿಕ ತಾಂಡಾಗಳಿವೆ. ಆದರೂ, ಈ ಭಾಗದವರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಅಖಿಲ ಭಾರತ ಬಂಜಾರಾ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ರಾಜು ಎಲ್. ಜಾಧವ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆಯಾದಾಗಿನಿಂದ ದಾವಣಗೆರೆ ಸೇರಿದಂತೆ ದಕ್ಷಿಣ ಕರ್ನಾಟಕದ ನಾಯಕರಿಗೆ ಹೆಚ್ಚಿನ ಅವಕಾಶ ದೊರೆತಿದೆ. ಇನ್ನಾದರೂ ಈ ಭಾಗಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಮುಖಂಡ ಡಾ.ಬಾಬು ರಾಜೇಂದ್ರ ನಾಯಕ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಯಾವಾಗಲೂ ಅನ್ಯಾಯವಾಗುತ್ತಲೇ ಇದೆ. ಆ ತಾರತಮ್ಯ ಧೋರಣೆಯಿಂದ ಬಂಜಾರಾ ಸಮುದಾಯ ಕೂಡ ಹೊರತಾಗಿಲ್ಲ ಎಂದರು.
ಬಂಜಾರಾ ಸಮುದಾಯದವರು ಎರಡನೇ ದರ್ಜೆಯವರಾಗಿದ್ದಾರೆ. ಮದುವೆಗೆ ಕರೆಯುವುದೂ ಕಟ್ಟಕಡೆಗೆ ಆದರೂ, ಆಯೇರಿ(ಉಡುಗೊರೆ) ಮಾತ್ರ ಮೊದಲಿಗೆ ಹಾಕಲೇಬೇಕು ಎಂಬ ಧೋರಣೆಯಂತಾಗಿದೆ ಸ್ಥಿತಿ ಎಂದು ಮಾರ್ಮಿಕವಾಗಿ ನುಡಿದರು.
ಬಂಜಾರಾ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತು. ಪ್ರತಿಫಲವಾಗಿ 68 ಕ್ಕೂ ಹೆಚ್ಚು ವಿಧಾನ ಸಭೆ ಕ್ಷೇತ್ರಕ್ಕೆ ಅನುಕೂಲವಾಯಿತು. ಅದಾಗ್ಯೂ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ಈ ಬಗ್ಗೆ ಸಮುದಾಯದ ನಾಯಕರು ಸಾಕಷ್ಟು ಬಾರಿ ಧ್ವನಿ ಎತ್ತಿದರೂ ಪ್ರಯೋಜನವಾಗಿಲ್ಲ ಎಂದರು.
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರಾ ಸಮುದಾಯದವರಿದ್ದಾರೆ. ಆದರೂ ಅವಕಾಶಗಳಿಂದ ವಂಚಿತರಾಗಿದ್ದಾರೆ. ಅಧಿಕಾರಕ್ಕಾಗಿ ಬಿಕ್ಷೆ ಬೇಡುವ ಸ್ಥಿತಿಗೆ ತಂದಿಡಲಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಈ ಭಾಗಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಜಲಜಾ ನಾಯಕ, ಬಾಲರಾಜ ನಾಯಕ, ಪಿ.ರಾಜೀವ ಹೀಗೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡವರು ದಕ್ಷಿಣ ಕರ್ನಾಟಕದವರೇ. ಯಾಕೆ ಉತ್ತರ ಕರ್ನಾಟಕದಲ್ಲಿ ನಾಯಕರಿಲ್ಲವಾ? ಯಾಕೆ ಈ ತಾರತಮ್ಯ? ಎಂದು ಪ್ರಶ್ನಿಸಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರಾದಿಯಾಗಿ ಕಾಂಗ್ರೆಸ್ ನಾಯಕರು ಉತ್ತರ ಕರ್ನಾಟಕದ ಲಂಬಾಣಿ ನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕೆಂದು ವಿನಂತಿಸಿದರು.
ಇನ್ನು ತಾಂಡಾ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂಬ ಊಹಾಪೋಹಗಳಿಗೆ ಸೂಕ್ತ ದಾಖಲೆ ಬೇಕು. ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಆರೋಪವಂತೂ ಕೇಳಿ ಬಂದಿದೆ. ಕೇವಲ ಆರೋಪದ ಮೇಲೆ ಯಾವುದೇ ನಿರ್ಧಾರಕ್ಕೆ ಬರಲಾಗಲ್ಲ. ತನಿಖೆ ಬಳಿಕ ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ನಿರ್ಧಾರ ಮತ್ತು ನಡೆ ಕುರಿತು ತಿಳಿಸಲಾಗುವುದು ಎಂದು ಡಾ.ಬಾಬು ರಾಜೇಂದ್ರ ನಾಯಕ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಂಡಾ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಂತೂ ಇದೆ. ಸದ್ಯಕ್ಕೆ ಆ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದರು.
ಹಿರಿಯರಾದ ಡಿ.ಎಲ್. ಚವಾಣ, ಸಂಜೀವ ಜಾಧವ, ಸುರೇಶ ಬಿರಾದಾರ ಮತ್ತಿತರರಿದ್ದರು.