ಕೊಳ್ಳೇಗಾಲ: ರಾಜ್ಯದಲ್ಲಿ ಪಶು ವ್ಯೆದ್ಯರ ಕೊರತೆಯಿದೆ. ವ್ಯೆದ್ಯರ ನೇಮಕ ವಿಚಾರದಲ್ಲಿ ಆಕಾಂಕ್ಷಿಗಳು ಕೋರ್ಟ್ ಮೊರೆ ಹೋಗಿರುವುದರಿಂದ ಸದ್ಯಕ್ಕೆ ಹೊರಗುತ್ತಿಗೆ ಆಧಾರದಡಿ ವ್ಯೆದ್ಯರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಚಿಂತಿಸಿದೆ ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ಪಟ್ಟಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಶು ಆಸ್ಪತ್ರೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿ ರೈತರಿಗೆ ನೆರವಾಗುತ್ತಿದೆ. ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಿಸಿದೆ. ಪಶು ವೈದ್ಯರು, ಇನ್ಸ್‌ಪೆಕ್ಟರ್ ಭರ್ತಿಗೆ ಶೀಘ್ರದಲ್ಲೇ ಚಾಲನೆ ನೀಡಲಾವುದು. ಬರಗಾಲ ಇರುವುದರಿಂದ ಜಮೀನಿನಲ್ಲಿ ಹುಲ್ಲು ಬೆಳೆಯಲು ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕೊಳ್ಳೇಗಾಲ ತಾಲೂಕಿನಲ್ಲಿ ಎಂಟು ಪಶು ಆಸ್ಪತ್ರೆಗಳಿದ್ದು, ಬಹುತೇಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಗ್ರಾಮೀಣ ಪ್ರದೇಶದ ರೈತರು ಕೊಳ್ಳೇಗಾಲಕ್ಕೆ ತಮ್ಮ ಜಾನುವಾರುಗಳನ್ನು ಕರೆ ತರುವ ಪರಿಸ್ಥಿತಿ ಉಂಟಾಗಿದೆ ಎಂದರು. ಜಿಲ್ಲಾಧಿಕಾರಿ ಶಿಲ್ಪಾನಾಗ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಎಎಸ್ಪಿ ಉದೇಶ್, ಚಾಮರಾಜನಗರ ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಹನುಮೇಗೌಡ, ತಾಲೂಕು ಪಶುವೈದ್ಯಾಧಿಕಾರಿ ಎ.ಮುತ್ತುರಾಜು, ಜಿಲ್ಲಾ ಪಂಚಾಯಿತಿ ಎಇಇ ಶಿವಪ್ರಕಾಶ್ ಇದ್ದರು.