ದ.ಕ. ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯಿಸಿ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ನಾಯಕ್, ನಿರ್ದೇಶಕರಾದ ಪ್ರದೀಪ್ ಡಿಸೋಜ ಮತ್ತು ಅಕ್ಷಯ ಭಂಡಾರ್ಕರ್ ಮನವಿ ಸಲ್ಲಿಸಿದರು.  
ಜಿಲ್ಲೆ

ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಮನವಿ

ಮಂಗಳೂರು: ನ್ಯಾಯಾಲಯದ ಆದೇಶದಂತೆ ಅನರ್ಹಗೊಂಡ ದ.ಕ. ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ನ್ಯಾಯಾಲಯದ ಆದೇಶದಂತೆ ಪದಾಧಿಕಾರಿಗಳ ಹುದ್ದೆಗಳು ಅಸ್ತಿತ್ವ ಕಳೆದುಕೊಂಡಿರುವುದರಿಂದ ಈ ಹುದ್ದೆಗಳಿಗೆ ಚುನಾವಣೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ಆಗುವವರೆಗೆ ಸಂಘದ ದೈನಂದಿನ ವ್ಯವಹಾರ ನೋಡಿಕೊಳ್ಳಲು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕಾಗಿ ಜಿಲ್ಲಾ ನೌಕರ ಸಂಘದ ನಿರ್ದೇಶಕರ ನಿಯೋಗ ಮನವಿ ಸಲ್ಲಿಸಿದೆ. ವಾರ್ಷಿಕ ಅರ್ಧ ಕೋಟಿಗೂ ಹೆಚ್ಚಿನ ಆದಾಯ ಇರುವ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಪನ್ಮೂಲ ಅಪವ್ಯಯವಾಗದಂತೆ ನೋಡಿಕೊಳ್ಳಲು ಹಾಗೂ ಸಂಘದ ಅಸ್ತಿತ್ವ ಉಳಿಸುವ ಸಲುವಾಗಿ ಜಿಲ್ಲಾ ಸಂಘಕ್ಕೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ನಾಯಕ್, ನಿರ್ದೇಶಕರಾದ ಪ್ರದೀಪ್ ಡಿಸೋಜ ಮತ್ತು ಅಕ್ಷಯ ಭಂಡಾರ್ಕರ್ ಇದ್ದರು. ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.