ಜಿಲ್ಲೆ

ಕಳಸ ಉಸ್ತುವಾರಿಗೆ ಎಸಿ ದರ್ಜೆ ಅಧಿಕಾರಿ ನೇಮಕ

ಕಳಸ: ಕಳಸ ತಾಲೂಕಿನ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ಕಂದಾಯ ಉಪ ವಿಭಾಗಾಕಾರಿ ದರ್ಜೆಯ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ.

ಪ್ರಸ್ತುತ ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ನಿಗಮದಲ್ಲಿ ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿಯಾಗಿರುವ ಎನ್.ತೇಜಸ್‌ಕುಮಾರ್ ಅವರನ್ನು ಕಳಸ ತಾಲೂಕು ಉಸ್ತುವಾರಿ ಅಧಿಕಾರಿಯಾಗಿ ನೇಮಿಸಿ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಎಸ್.ಕಲ್ಪನಾ ಅದೇಶ ಹೊರಡಿಸಿದ್ದಾರೆ.

ಈ ಉಸ್ತುವಾರಿ ಅಧಿಕಾರಿ ಕಳಸಕ್ಕೆ ಭೇಟಿ ನೀಡಿ, ಸರ್ಕಾರದ ಅಸೂಚನೆಯಲ್ಲಿ ಸೂಚಿಸಿದ ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸುವ ಜವಾಬ್ದಾರಿ ನೀಡಲಾಗಿದೆ. ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಅನುಷ್ಟಾನದ ಬಗ್ಗೆ ಪರಿಶೀಲನೆ ನಡೆಸುವುದು, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವಸತಿ ನಿಯಲಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವುದು, ಶಾಲೆ, ಕಾಲೇಜು, ಐಟಿಐ ಸಂಸ್ಥೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದು, ಶಾಲಾ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣ ಇತ್ಯಾದಿ ಕಾಮಗಾರಿಗಳ ಪರಿಶೀಲನೆ ನಡೆಸಬೇಕಿದೆ.

ಈಗಾಗಲೆ ಒಂದು ಬಾರಿ ಎನ್. ತೇಜಸ್ ಕುಮಾರ್ ಕಳಸಕ್ಕೆ ಭೇಟಿ ನೀಡಿ, ತಾಲೂಕು ಕಚೇರಿಯಲ್ಲಿ ಸಭೆ ನಡೆಸಿ, ಕಳಸ, ಬಾಳೆಹೊಳೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಿರುತ್ತಾರೆ. ಈ ತಿಂಗಳಿನಲ್ಲಿ ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಕಳಸ ತಹಸೀಲ್ದಾರ್ ಎಸ್.ಶಾರದ ತಿಳಿಸಿದರು.