ದೇವದುರ್ಗ: ತಾಲೂಕಿನ ಗಲಗ ಗ್ರಾಪಂಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ಸಹಾಯಕ ನಿರ್ದೇಶಕ ತ್ಯಾಗರಾಜ ನೇತೃತ್ವದ ತಂಡ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿಗಳ ದಾಖಲೆಗಳನ್ನು ಮಂಗಳವಾರ ಪರಿಶೀಲಿಸಿತು.
ಗ್ರಾಪಂ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಸಾಮಗ್ರಿ ಬಿಲ್‌ಗಳ ಎಫ್‌ಟಿಒಗಳ ಪರಿಶೀಲನೆ ಮಾಡಿದರು. ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆಯ ಮೂಲಪ್ರತಿಯನ್ನು ಜಿಪಂಗೆ ನೀಡಬೇಕು. ಶಾಲಾ ಸಮತಟ್ಟು ಮಾಡುವ ಸಂದರ್ಭದಲ್ಲಿ ಪ್ರತಿಕಡತಕ್ಕೆ ಪುಟ ಸಂಖ್ಯೆಯನ್ನು ಸಮೂದಿಸಬೇಕು. ಕೂಲಿಕಾರ್ಮಿಕರ ಸಹಿ ಅಥವಾ ಹೆಬ್ಬೆರಳು ನೀಲಿ ಶಾಹಿ ಪಡೆದ ನಂತರ ಅವರ ಹೆಸರು ಬರೆಯಬೇಕು ಎಂದು ಸೂಚಿಸಿದರು.
ಖಾತ್ರಿ ಯೋಜನೆಯಡಿ ಅರ್ಜಿ ಸಲ್ಲಿಸುವ ಎಲ್ಲ ಕೂಲಿಕಾರರಿಗೂ ಕೆಲಸ ನೀಡಬೇಕು. ಕೆಲಸ ನೀಡುವ ಸ್ಥಳ, ಜಿಪಿಎಸ್, ಫೋಟೋ ಸೇರಿ ಅಗತ್ಯವಾದವುಗಳನ್ನು ದಾಖಲಿಸಿ ಕೆಲಸ ನೀಡಿ, ಕೂಲಿ ಪಾವತಿಸಬೇಕು.
ನರೇಗಾ ಯೋಜನೆಯಡಿ ಪ್ರತಿಯೊಂದು ಕೆಲಸಕ್ಕೂ ದಾಖಲೆ ತೋರಿಸಬೇಕು. ಯಾವುದೇ ನಕಲಿ ದಾಖಲೆಗೆ ಅವಕಾಶ ನೀಡಬಾರದು. ಬೇಜವಾಬ್ದಾರಿ ತೋರಿದರೆ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಎಡಿಪಿಐ ಮಲ್ಲಮ್ಮ, ಜಿಪಂ ಡಿಎಂ ವೆಂಕಟೇಶ, ಅಕೌಂಟ್ ಮ್ಯಾನೇಜರ್ ಬಸವರಾಜ, ಸಾಗರ, ಉಮೇಶ ಇತರರಿದ್ದರು.