ಬೆಂಗಳೂರು: ಮಹಾನಗರದಲ್ಲಿ ಒಂಟಿ ಮನೆ ನಿರ್ಮಾಣಕ್ಕಾಗಿ ಈ ತಿಂಗಳ 25ರೊಳಗಾಗಿ ಅರ್ಜಿ ಸಲ್ಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮ’ದಲ್ಲಿ ಮಂಗಳವಾರ ನಾಗರಿಕರಿಂದ ಬಂದ ದೂರುಗಳಿಗೆ ಸ್ಪಂದಿಸಿ 30ಕ್ಕೂ ಹೆಚ್ಚು ನಾಗರಿಕರು ಒಂಟಿ ಮನೆ ಯೋಜನೆಯಲ್ಲಿ ಅನುದಾನ ಒದಗಿಸಲು ಮನವಿ ಮಾಡಿದರು.
ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಯಿಸಿ, 2022ರಿಂದ 24ರವರೆಗೆ ಒಂಟಿ ಮನೆಗಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಶೀಘ್ರ ಅನುದಾನ ಒದಗಿಸಲಾಗುವುದು. ಒಂಟಿ ಮನೆ ನಿರ್ಮಾಣಕ್ಕಾಗಿ ಇದುವರೆಗೆ ಅರ್ಜಿ ಸಲ್ಲಿಸದೇ ಇರುವವರು ಕೂಡಲೆ ಪಾಲಿಕೆ ವೆಬ್ಸೈಟ್‌ಗೆ ಭೇಟಿ ನೀಡಿ ಅರ್ಜಿ ಪಡೆದು ಗಡುವಿನೊಳಗೆ ಆಯಾ ವಲಯದ ಕಲ್ಯಾಣ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ರಾಜಕಾಲುವೆ ಮೇಲೆ ಸ್ಲ್ಯಾಬ್ ತೆರವುಗೊಳಿಸಿ:
ಕಾಸ ಗ್ರ್ಯಾಂಡ್ ಬಳಿಯಿರುವ ರಾಜಕಾಲುವೆ ಮೇಲೆ ಸ್ಲ್ಯಾಬ್ ಅಳವಡಿಸಿದ್ದು, ಅದನ್ನು ತೆರವುಗೊಳಿಸಲು ಕೆಲ ನಾಗರಿಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿ, ರಾಜಕಾಲುವೆ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರಾಜಕಾಲುವೆ ಮೇಲೆ ಅಳವಡಿಸಿರುವ ಸ್ಲ್ಯಾಬ್ಗಳನ್ನು ಕೂಡಲೆ ತೆರವುಗೊಳಿಸಬೇಕು. ತೆರವುಗೊಳಿಸಲು ಅಡ್ಡಪಡಿಸಿದಲ್ಲಿ ಅಂತಹವರ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಿದರು.
ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆ ಮಿಯಾವಾಕಿ ಅರಣ್ಯದಲ್ಲಿ ನೆಟ್ಟಿರುವ ಸಸಿಗಳಿಗೆ ಜಲಮಂಡಳಿಯ ಸಂಸ್ಕರಣಾ ನೀರನ್ನು ಟ್ಯಾಂಕರ್‌ಗಳ ಮೂಲಕ ವ್ಯವಸ್ಥೆ ಮಾಡಬೇಕು. ಜತೆಗೆ ರಾಯಲ್ ರೆಸಿಡೆನ್ಸಿ ಪಾರ್ಕ್‌ಗೆ ತ್ವರಿತವಾಗಿ ಫೆನ್ಸಿಂಗ್ ಮಾಡಲು ನಿರ್ದೇಶಿಸಿದರು.
ರಸ್ತೆಗುಂಡಿ ಮುಚ್ಚಲು ಸೂಚನೆ:
ಬೊಮ್ಮನಹಳ್ಳಿ ವಲಯದ ವಿವಿಧೆಡೆ ಪ್ರಮುಖ ರಸ್ತೆ, ವಾರ್ಡ್ ರಸ್ತೆಗಳಲ್ಲಿನ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಬೇಕು.15 ದಿನಗಳ ಒಳಗಾಗಿ ರಸ್ತೆಗುಂಡಿಗಳನ್ನು ಮುಚ್ಚಿ ತಮ್ಮ ಕಚೇರಿಗೆ ಮಾಹಿತಿ ನೀಡುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸದರು.
ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ವಲಯ ಆಯುಕ್ತೆ ರಮ್ಯಾ, ಜಂಟಿ ಆಯುಕ್ತ ಅಜಿತ್, ಉಪ ಆಯುಕ್ತ ಡಿ.ಕೆ. ಬಾಬು, ಮುಖ್ಯ ಅಭಿಯಂತರ ಶಶಿಕುಮಾರ್ ಸೇರಿ ಇನ್ನಿತರ ಅಧಿಕಾರಿಗಳು ಇದ್ದರು.
ಒಳಚರಂಡಿ ದುರಸ್ತಿ ಜಲಮಂಡಳಿ ಹೊಣೆ:
ಬಿಬಿಎಂಪಿಗೆ ಸೇರಿದ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿರುವ ಒಳಚಂಡಿಗಳ ದುರಸ್ತಿ ಕಾಮಗಾರಿಯನ್ನು ಜಲಮಂಡಳಿಯಿಂದ ಮಾಡಬೇಕಿದೆ. ಈ ಸಂಬಂಧ ಇನ್ನು ಮುಂದೆ ಪಾಲಿಕೆಯಿಂದ ಯಾವುದೇ ಒಳಚರಂಡಿ ದುರಸ್ತಿ ಕಾರ್ಯವನ್ನು ನಡೆಸಬಾರದು ಎಂದು ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆ ಕಾಮಗಾರಿ ಪರಿಶೀಲನೆ:
ಹೊಂಗಸಂದ್ರ ಮೆಟ್ರೋ ನಿಲ್ದಾಣದ ಬಳಿ ರಾಜಕಾಲುವೆ ಕಾಮಗಾರಿ ಕುರಿತಂತೆ ಸ್ಥಳ ಪರಿಶೀಲಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜತೆ ಸಮನ್ವಯ ಸಾಧಿಸಿ ಕಾಮಗಾರಿ ಕೈಗೆತ್ತಿಕೊಂಡು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.