ದೊಡ್ಡಬಳ್ಳಾಪುರ: ನೇಕಾರ ಸಮ್ಮಾನ್ ಯೋಜನೆಯಲ್ಲಿ ಪ್ರತಿಯೊಬ್ಬ ನೇಕಾರರು ವಾರ್ಷಿಕ 5,000 ರೂ. ಆರ್ಥಿಕ ನೆರವು ಪಡೆಯಲು ಪ್ರತಿವರ್ಷವೂ ಅರ್ಜಿ ಸಲ್ಲಿಸಬೇಕಿದ್ದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅ.10 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕಿ ಸೌಮ್ಯಾ ತಿಳಿಸಿದರು. ನಗರದಲ್ಲಿ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ನೇಕಾರರ ಸಮ್ಮಾನ್ ಯೋಜನೆ ಕುರಿತು ಮಾಹಿತಿ ನೀಡಿದರು.
ಈ ಹಿಂದೆ ಅರ್ಜಿ ಸಲ್ಲಿಸಿ ನೇಕಾರ ಸಮ್ಮಾನ್ ಯೋಜನೆಯಲ್ಲಿ ಹಣ ಪಡೆದಿದ್ದರೂ ಈಗ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕು. ನೇಯ್ಗೆ ಕೆಲಸ ಮಾಡುತ್ತಿರುವ ಕಾರ್ಮಿಕರು ಕೆಲಸ ಮಾಡುತ್ತಿರುವ ಕುರಿತಂತೆ ಪ್ರಮಾಣ ಪತ್ರ, ಕಾರ್ಮಿಕ ಇಲಾಖೆಯಿಂದ ಪಡೆದ ಉದ್ಯೋಗ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ, ಪಡಿತರ ಚೀಟಿ ಹಾಗೂ ಆಧಾರ್ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಬೇಕು ಎಂದರು. ವಿದ್ಯುತ್ ಮಗ್ಗಗಳನ್ನು ಹೊಂದಿರುವ ಮಾಲೀಕರು ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಪ್ರಮಾಣ ಪತ್ರ ನೀಡುವುದರಿಂದ ಯಾವುದೇ ತೊಂದರೆ ಇಲ್ಲ. ನೇಕಾರರು ಅಲ್ಲದವರು ಅರ್ಜಿ ಸಲ್ಲಿಸಿ ಹಣ ಪಡೆಯುವುದನ್ನು ತಪ್ಪಿಸುವ ಸಲುವಾಗಿ ಪ್ರಮಾಣ ಪತ್ರ ಪಡೆಯಲಾಗುತ್ತಿದೆ ಎಂದರು.
ಜವಳಿ ಇಲಾಖೆಯಿಂದ ಜಿಲ್ಲೆಯಲ್ಲಿ ಸಮೀೆ ನಡೆಸಿ 17 ಸಾವಿರ ಜನರಿಗೆ ನೇಕಾರರ ಗುರುತಿನ ಕಾರ್ಡ್ ವಿತರಿಸಲಾಗಿದೆ. ಜಿಲ್ಲೆಯಲ್ಲಿಯೇ ದೊಡ್ಡಬಳ್ಳಾಪುರ ನಗರದಲ್ಲಿ ಹೆಚ್ಚಿನ ನೇಕಾರರು ಇದ್ದು, 15 ಸಾವಿರ ಕಾರ್ಡ್ಗಳನ್ನು ವಿತರಿಸಲಾಗಿದೆ.ರಾಜ್ಯ ಸರ್ಕಾರ 2024ರ ಏಪ್ರಿಲ್ ತಿಂಗಳಿಂದ 10 ಎಚ್ಪಿ ವರೆಗೆ ವಿದ್ಯುತ್ ಸಂಪರ್ಕ ಪಡೆದಿರುವ ನೇಕಾರರಿಗೆ ಉಚಿತ ವಿದ್ಯುತ್ ಪೂರೈಕೆ ಯೋಜನೆ ಜಾರಿಗೆ ತಂದ ನಂತರ, ಜಿಲ್ಲೆಯಲ್ಲಿ ನಡೆಸಿದ ಸಮೀೆಯಲ್ಲಿ ಚಾಲ್ತಿಯಲ್ಲಿಲ್ಲದ, ಸೂಕ್ತ ದಾಖಲೆಗಳು ಸಲ್ಲಿಸದ 1,280 ಸಂಪರ್ಕ ರದ್ದುಪಡಿಸಲಾಗಿದೆ. ಇವುಗಳ ಪೈಕಿ 200 ನೇಕಾರರು ಸೂಕ್ತ ದಾಖಲೆ ಸಲ್ಲಿಸಿದ ನಂತರ ಈ ಹಿಂದಿನ ವಿದ್ಯುತ್ ಬಿಲ್ ಬಾಕಿ ಮೊತ್ತ ಸೇರಿ ಇಲ್ಲಿಯವರೆಗಿನ ರಿಯಾಯಿತಿ ಹಣ ಬೆಸ್ಕಾಂಗೆ ಪಾವತಿಸಲಾಗಿದೆ. ಈಗಲೂ ವಿದ್ಯುತ್ ರಿಯಾಯಿತಿ, 10 ಎಚ್.ಪಿ.ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ನೇಕಾರರು ಅಗತ್ಯ ದಾಖಲೆ ಸಲ್ಲಿಸುವ ಮೂಲಕ ಯೋಜನೆಯ ಉಪಯೋಗ ಪಡೆಯಬಹುದು ಎಂದರು.
ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಪಿ.ಎ.ವೆಂಕಟೇಶ್ ಮಾತನಾಡಿ, ನೇಕಾರಿಕೆ ಎಂದರೆ ಸೀರೆ ನೇಯುವವರು ಮಾತ್ರ ಅಲ್ಲ. ಸೀರೆ ನೇಯ್ಗೆ ಪೂರ್ವದಲ್ಲಿ ರೇಷ್ಮೆ ಬಣ್ಣ ಮಾಡುವ, ವಾರ್ಪ್ ಸುತ್ತುವ, ಕಂಡಿಕೆ, ವೈಡಿಂಗ್ ಹಾಕುವವರು, ರೀಡು ತುಂಬುವವರು ಸೇರಿ ಎಲ್ಲರೂ ನೇಕಾರರಾಗಿದ್ದಾರೆ. ಹಾಗಾಗಿ ನೇಕಾರ ಸಮ್ಮಾನ್ ಯೋಜನೆಯಲ್ಲಿ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದರು.
ನಾಳೆ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ: ದೊಡ್ಡಬಳ್ಳಾಪುರದ ಕರೇನಹಳ್ಳಿ ಭಾಗದಲ್ಲಿಯೇ ಹೆಚ್ಚಿನ ನೇಕಾರಿಕೆ ಇರುವುದು. ಆದರೆ, ಈ ಭಾಗದಲ್ಲಿ ವಿದ್ಯುತ್ ಸಂಪರ್ಕಕ್ಕೆ ತಕ್ಕಂತೆ ವಿದ್ಯುತ್ ಪರಿವರ್ತಕಗಳು(ಟಿಸಿ) ಇಲ್ಲದೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಲೇ ಇದೆ. ಇದರಿಂದ ನೇಕಾರರು ತೊಂದರೆಗೆ ಸಿಲುಕುವಂತಾಗಿದೆ. ಹಾಗೆಯೇ ಹತ್ತಾರು ವರ್ಷಗಳ ಹಿಂದೆಯೇ ವಿದ್ಯುತ್ ಸಂಪರ್ಕ ಪಡೆದಿರುವ ನೇಕಾರರು ಹಾಗೂ ಗೃಹ ಬಳಕೆದಾರರು ಹೆಚ್ಚುವರಿ ಭದ್ರತಾ ಠೇವಣಿಯನ್ನು ಒಂದು ತಿಂಗಳ ಒಳಗೆ ಪಾವತಿ ಮಾಡದೆ ಇದ್ದರೆ ಸಂಪರ್ಕ ಕಡಿತ ಮಾಡುವ ಕುರಿತು ಬೆಸ್ಕಾಂ ನೋಟಿಸ್ ಜಾರಿಗೊಳಿಸಿದೆ. ಇದರ ವಿರುದ್ಧ ಸೆ.30 ರಂದು ಬೆಳಗ್ಗೆ 10 ಗಂಟೆಗೆ ನಗರದ ಬೆಸ್ಕಾಂ ಕಚೇರಿ ಮುಂಭಾಗ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.