ಹೂವಿನಹಿಪ್ಪರಗಿ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಚಾಲನೆ ನೀಡಿದರು. ಕೃಷಿ ಉಪನಿರ್ದೇಶಕ ಪ್ರಕಾಶ ಚವ್ಹಾಣ, ಎಂ.ಎಚ್. ಯರಝೇರಿ, ಸಂತೋಷ ರಾಠೋಡ ಇತರರಿದ್ದರು. 
ಜಿಲ್ಲೆ

ನಿಗದಿತ ಪ್ರಮಾಣದಲ್ಲಿ ರಸಗೊಬ್ಬರ ಬಳಸಿ

ದತ್ತಾತ್ರೇಯ ಪಿ ಕುಲಕರ್ಣಿ

ಹೂವಿನಹಿಪ್ಪರಗಿ: ರೈತರು ಬೆಳೆದ ಬೆಳೆಗಳಿಗೆ ನಿಗದಿತ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಔಷಧಿಗಳನ್ನು ಹಾಕಬೇಕು. ಬೆಳೆಗಳಿಗೆ ಗೊಬ್ಬರ ಹೆಚ್ಚಾಗಿ ಬಳಸುವುದರಿಂದ ಬೆಳೆ ಹಾಳಾಗುತ್ತದೆ ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹೇಳಿದರು.

ಹೂವಿನಹಿಪ್ಪರಗಿ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ವೈಜ್ಞಾನಿಕ ಬೆಳೆ ಬೆಳೆದು ಅಧಿಕ ಲಾಭ ಪಡೆದುಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಉಪಯೋಗಿಸಿ ಆರ್ಥಿಕವಾಗಿ ಸಬಲರಾಗಬೇಕು. ರಿಯಾಯಿತಿ ದರದಲ್ಲಿ ಬೀಜ ಮಾರಾಟದಲ್ಲಿ ಅಕ್ರಮ ನಿಯಂತ್ರಣಕ್ಕೆ ಇದೇ ಮೊದಲ ಬಾರಿಗೆ ರೈತರಿಗೆ ಬಾರ್ ಕೋಡ್ ಸ್ಕಾೃನರ್ ಕಡ್ಡಾಯಗೊಳಿಸಿದೆ.

ಖರೀದಿಗೆ ಕೋಡ್ ಸ್ಕಾೃನರ್ ಆದ ಬಳಿಕವಷ್ಟೆ ಗಣಕ ಯಂತ್ರದಲ್ಲಿ ನಮೂದಾಗಿ ಖರೀದಿ ರಸೀದಿ ಬರುತ್ತದೆ. ರಿಯಾಯಿತಿ ದರದ ಹೆಚ್ಚುವರಿ ಬೀಜ ಖರೀದಿಗೆ ಬಾರ್ ಕೋಡ್ ಸ್ಕಾೃನರ್ ಆಗದೇ ಲಾಕ್ ಆಗುತ್ತದೆ. ರಿಯಾಯಿತಿ ದರದ ಮಾರಾಟ ದುರುಪಯೋಗವಾಗುವುದನ್ನು ಇದು ನಿಯಂತ್ರಿಸುತ್ತದೆ ಎಂದರು.

ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿ ಮಾಡಿದಲ್ಲಿ ಕಡ್ಡಾಯವಾಗಿ ರಸೀದಿಗಳನ್ನು ಪಡೆದುಕೂಳ್ಳಬೇಕು. ಮಳೆಯಾದ ತಕ್ಷಣ ಕೃಷಿ ಇಲಾಖೆಗೆ ಬಂದು ಅಧಿಕಾರಿಗಳೊಂದಿಗೆ ಸಹಕರಿಸಿ ಬೀಜಗಳನ್ನು ಶಾಂತ ರೀತಿಯಲ್ಲಿ ಪಡೆದುಕೊಳ್ಳಬೇಕು. ಅಧಿಕಾರಿಗಳು ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕೃಷಿ ಪರಿಕರಗಳನ್ನು ವಿತರಿಸಬೇಕು ಎಂದರು.

ಕೃಷಿ ಉಪನಿರ್ದೇಶಕ ಪ್ರಕಾಶ ಚವ್ಹಾಣ ಮಾತನಾಡಿ, ಸಾವಯುವ ಲಘು ಪೋಷಕಾಂಶಗಳವುಳ್ಳ ಬೆಳೆಗಳನ್ನು ಬೆಳೆಯುವಲ್ಲಿ ನಾವೇ ಮೊದಲಿಗರು. ರೈತರು ಮೋಸ ಹೋಗಬಾರದು ಎನ್ನುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಬೀಜ ಖರೀದಿ ನಡೆದಿದೆ. ಕಡಿಮೆ ಖರ್ಚಿನಲ್ಲಿ ಬೆಳೆಗಳನ್ನು ಬೆಳೆಯಬೇಕು. ವಾಡಿಕೆಯಂತೆ ಮಳೆಯಾಗುತ್ತದೆ ರೈತರು ಭಯಪಡುವ ಅವಶ್ಯಕತೆಯಿಲ್ಲ. ಬೆಳೆಗಳನ್ನು ಪರಿವರ್ತನೆ ಮಾಡಿ ಬೆಳೆದಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್. ಯರಝೇರಿ, ಕೃಷಿ ಅಧಿಕಾರ ಸಂತೋಷ ರಾಠೋಡ ಮಾತನಾಡಿದರು. ಕೃಷಿ ಆಧಿಕಾರಿ ಗೋವಿಂದರೆಡ್ಡಿ ಮೆದಕಿನಾಳ, ಗ್ರಾಪಂ ಅಧ್ಯಕ್ಷ ಮುರಗೇಶ ತಾಳಿಕೋಟಿ, ಶಾಂತಗೌಡ ನಾಡಗೌಡ, ಮಲ್ಲಪ್ಪ ದೊಡಮನಿ, ಗುರುನಗೌಡ ಪಾಟೀಲ, ನಿಂಗಣ್ಣ ಶಿವಯೋಗಿ, ಚನ್ನಪ್ಪ ತಿಳಿಗೋಳ, ಅನಿಲಗೌಡ ಪಾಟೀಲ, ಸಂಗಮೇಶ ಹಳ್ಳೂರ, ಗುರುನಗೌಡ ಪಾಟೀಲ ಇತರರಿದ್ದರು.