ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಅದಮ್ಯ ರಂಗ ಶಾಲೆಯು 30 ದಿನಗಳ ಅವಧಿಯ ರಂಗ ತರಬೇತಿ ಶಿಬಿರ ಆಯೋಜಿಸಿದ್ದು, ಹವ್ಯಾಸಿ ರಂಗಾಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಶಿಬಿರವು ನಗರದ ಕೆ.ಜಿ. ಕೊಪ್ಪಲಿನ ಹೊಸ ನ್ಯಾಯಾಲಯದ ಎದುರಿರುವ ನೇಗಿಲಯೋಗಿ ಮರುಳೇಶ್ವರ ಸೇವಾಭವನದಲ್ಲಿ ಸೆ. 1 ರಿಂದ ಅ.1 ರವರೆಗೆ ಪ್ರತಿದಿನ ಸಂಜೆ 6.30ರಿಂದ ರಾತ್ರಿ 9 ಗಂಟೆವರೆಗೆ ಶಿಸ್ತುಬದ್ಧವಾಗಿ ನಡೆಯಲಿದೆ ಎಂದು ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ.ಸತೀಶ್ ಜವರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಅಭಿನಯ ಕಲೆ’ಗೆ ಒತ್ತು ನೀಡಿ ಕಲಿಸುವ ಪರಮ ಧ್ಯೇಯ ಹೊಂದಿರುವ ರಂಗ ಶಿಬಿರದಲ್ಲಿ ಹಿರಿಯರೊಟ್ಟಿಗೆ ಕಿರಿಯರೂ ಕಲೆತು ರಂಗಭೂಮಿಗೆ ಸಂಬಂಧಿಸಿದ ಬಹುಮುಖಿ ಮಜಲುಗಳನ್ನು ಅರಿಯಲು ಅವಕಾಶವಿದೆ. ಕನ್ನಡ ಮತ್ತು ಜಾಗತಿಕ ರಂಗಭೂಮಿ, ವಿವಿಧ ನಾಟಕಗಳು, ಅಭಿನಯ ಕಲೆ, ತೆರೆಯ ಹಿಂದಿನ ರಂಗತಾಂತ್ರಿಕ ವಿಷಯಗಳ ಬಗ್ಗೆ ನುರಿತ ರಂಗತಜ್ಞರು ಶಿಬಿರಾರ್ಥಿಗಳಿಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುವರು.
18 ರಿಂದ 60 ವಯೋಮಿತಿಯೊಳಗಿನ ಮಹಿಳೆಯರು ಮತ್ತು ಪುರುಷರು ಈ ಅಭಿನಯ ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರದ ಅವಧಿಯಲ್ಲಿ ನಾಟಕವೊಂದನ್ನು ಆಯ್ಕೆ ಮಾಡಿಕೊಂಡು, ಶಿಬಿರಾರ್ಥಿಗಳಿಂದಲೇ ಅಭಿನಯ ಮಾಡಿಸಿ ಸಮಾರೋಪದಲ್ಲಿ ಪ್ರದರ್ಶನ ಮಾಡಲಾಗುವುದು. ಶಿಬಿರ ಪೂರ್ಣಗೊಳಿಸಿದ ಎಲ್ಲರಿಗೂ ಅಧಿಕೃತ ಪ್ರಮಾಣಪತ್ರವನ್ನೂ ನೀಡಲಾಗುವುದು.
ಅಭಿನಯ ಕಲಿಕೆಯಲ್ಲಿ ಆಸಕ್ತಿ ಇರುವವರು ಆ.31 ರೊಳಗೆ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ಅವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಗರಿಷ್ಠ 30 ಮಂದಿಗೆ ಮಾತ್ರ ಅವಕಾಶವಿರುತ್ತದೆ. ಮೊದಲು ಬಂದವರಿಗೆ ಆದ್ಯತೆ. ಸಮಯ ಬದ್ಧತೆ ಹಾಗೂ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊ: 8660103141, 7204034040 ಸಂಪರ್ಕಿಸಲು ಕೋರಲಾಗಿದೆ.