ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರದಿಂದ 2024-25ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯ ಎಂಟು ತಾಲೂಕಿನ 14 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ಹೋಬಳಿ ಮಟ್ಟದ ಬೆಳೆಗಳಾದ ಹುರುಳಿ, ಹೆಸರು ಬೆಳೆಗಳು ಮಳೆ ಆಶ್ರಿತ ಬೆಳೆಗಳಾಗಿವೆ. ಜೋಳ ಮತ್ತು ಮುಸುಕಿನ ಜೋಳ ನೀರಾವರಿ ಆಶ್ರಿತ ಬೆಳೆಗಳಾಗಿವೆ. ಗೋಧಿ, ಸೂರ್ಯಕಾಂತಿ ಹಾಗೂ ಕಡಲೆ ಬೆಳೆಗಳು ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಗಳಾಗಿವೆ. ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಜೋಳ ಮತ್ತು ಕಡಲೆ ಮಳೆ ಆಶ್ರಿತ ಬೆಳೆಗಳಾಗಿವೆ. ಕಲಘಟಗಿ ತಾಲೂಕಿನಲ್ಲಿ ಜೋಳ ಮಳೆ ಆಶ್ರಿತ ಬೆಳೆಯಾಗಿದೆ.
ಜೋಳ ಮತ್ತು ಕಡಲೆ ಬೆಳೆಗಳಿಗೆ ಅರ್ಜಿ ಸಲ್ಲಿಸಿ ನೋಂದಾಯಿಸಲು ನ. 30, ಹುರಳಿ, ಕುಸುಬೆ ಮಳೆ ಆಶ್ರಿತ ಬೆಳೆ ಹಾಗೂ ಸೂರ್ಯಕಾಂತಿ ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಗೆ ನ. 15, ಕಡಲೆ, ಹೆಸರು, ಗೋಧಿ ಹಾಗೂ ಜೋಳ ಮತ್ತು ಮುಸಿಕಿನ ಜೋಳ ಬೆಳೆಗಳಿಗೆ ನ. 30 ಕೊನೇ ದಿನ. ನೀರಾವರಿ ಆಶ್ರಿತ ಗೋಧಿ ಬೆಳೆಗೆ ಡಿ. 16, ನೀರಾವರಿ ಆಶ್ರಿತ ಕಡಲೆ ಬೆಳೆಗೆ ಡಿ. 31ರೊಳಗೆ ಅರ್ಜಿ ಸಲ್ಲಿಸಬೇಕು.
ಬೇಸಿಗೆ ಹಂಗಾಮಿಗೆ ಹೋಬಳಿ ಮಟ್ಟದ ಬೆಳೆಗಳಾದ ಕಲಘಟಗಿ ತಾಲೂಕಿನ ದುಮ್ಮವಾಡ, ಹುಬ್ಬಳ್ಳಿಯ ಛಬ್ಬಿ ಮತ್ತು ಕುಂದಗೋಳ ತಾಲೂಕಿನ ಸಂಶಿ ವ್ಯಾಪ್ತಿಯ ನೆಲಗಡಲೆ (ಶೇಂಗಾ) ಬೆಳೆಗೆ 2025ರ ಫೆ. 28 ಕೊನೇ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಬೆಂಗಳೂರಿನ ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ, ಸ್ಥಳಿಯ ಕೃಷಿ ಇಲಾಖೆ, ಕಂದಾಯ, ಗ್ರಾಮೀಣ ಅಭಿವೃದ್ಧಿ, ತೋಟಗಾರಿಕೆ ಇಲಾಖೆ ಮತ್ತು ಸ್ಥಳಿಯ ಹಣಕಾಸು ಸಂಸ್ಥೆಗಳಾದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಸೇವಾ ಬ್ಯಾಂಕ್ಗಳನ್ನು ಸಂಪರ್ಕಿಸಬಹುದು ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.