ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಂಘ, ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ, ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ತಲಾ 25,000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ, ಸಂಸ್ಥೆಗಳಿಗೆ ತಲಾ 1 ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ಮಕ್ಕಳ ದಿನಾಚರಣೆಯಂದು ಪ್ರದಾನ ಮಾಡಿ ಗೌರವಿಸಲಾಗುತ್ತದೆ.
6 ರಿಂದ 18ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗು ತೊರೆದು, ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗೆ ಧೈರ್ಯ ಸಾಹಸ ಪ್ರದಶಿರ್ಸಿದ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಧೈರ್ಯ ಸಾಹಸ ಪ್ರದಶಿರ್ಸಿದ ಮಕ್ಕಳಿಗೆ ತಲಾ 10,000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುವುದು.
ಪ್ರಕರಣವು 2023ರ ಅ. 1ರಿಂದ 2024ರ ಜು. 31ರೊಳಗೆ ನಡೆದಿರಬೇಕು. 2006ರ ಆ. 1ರ ನಂತರ ಜನಿಸಿದ ಮಕ್ಕಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಆಸಕ್ತರು ಅರ್ಜಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ದ್ವಿಪ್ರತಿಯಲ್ಲಿ ಸೆ. 20ರೊಳಗೆ ಕಚೇರಿಯಲ್ಲಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.