ಶರಾವತಿ ಹಿನ್ನೀರಿನ ಸಮಾಜ ಪರಿವರ್ತನಾ ಟ್ರಸ್ಟ್ ಸದಸ್ಯರು ಪಲ್ಲವಿ ಸಾತೇನಹಳ್ಳಿ ಅವರಿಗೆ ಮನವಿ ಸಲ್ಲಿಸಿದರು. ಆನಂದ್, ಎಂ.ಸುಕುಮಾರ್, ಲೋಕೇಶ್, ಗುರುಮೂರ್ತಿ, ಮಂಜುನಾಥ್ ಇದ್ದರು. 
ಜಿಲ್ಲೆ

ಪರಿಸರಸ್ನೇಹಿ ಗಣೇಶ ಸ್ಥಾಪನೆ ಮನವಿ

Shivamogga - Desk - Praveena Kumar S

ಬ್ಯಾಕೋಡು: ಸಾಗರ ತಾಲೂಕಿನಲ್ಲಿ ಪ್ರತಿವರ್ಷ ಗಣೇಶ ಮೂರ್ತಿ ತಯಾರಕರಿಗೆ ಹಾಗೂ ಪ್ರತಿಷ್ಠಾಪಿಸುವ ಸಂಘಗಳಿಗೆ ಅನುಮತಿ ನೀಡುವಾಗ ನೀರಿನಲ್ಲಿ ಕರಗುವ ಜೇಡಿಮಣ್ಣು ಮತ್ತು ನೈಸರ್ಗಿಕವಾಗಿ ಕರಗುವ ಬಣ್ಣಗಳನ್ನು ಮಾತ್ರ ಉಪಯೋಗಿಸಿ ತಯಾರಿಸಬೇಕು ಎಂದು ಸೂಚಿಸುವಂತೆ ಶರಾವತಿ ಹಿನ್ನೀರಿನ ಸಮಾಜ ಪರಿವರ್ತನಾ ಟ್ರಸ್ಟ್ನಿಂದ ಗುರುವಾರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಗಣೇಶ ಮೂರ್ತಿಗಳನ್ನು ತಯಾರಿಸುವಾಗ ಹುಲ್ಲು ಮತ್ತು ಬಿದಿರು ಕಡ್ಡಿ ಬಳಕೆ ಮಾಡುವಂತಿಲ್ಲ. ಆದರೆ ವಾಸ್ತವದಲ್ಲಿ ಈ ಷರತ್ತುಗಳು ಪಾಲನೆಯಾಗುತ್ತಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ನಿಷೇಧವಿದ್ದರೂ ಹಲವರು ಬಹಿರಂಗವಾಗಿಯೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಟ್ರಸ್ಟ್ ಸಂಚಾಲಕ ಆನಂದ ಮನವಿಯಲ್ಲಿ ತಿಳಿಸಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಯಲ್ಲಿದ್ದರೂ ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸಂಭಂಧ ಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಎಲ್ಲೆಂದರಲ್ಲಿ ದೊಡ್ಡ ಗಣೇಶನ ಮೂರ್ತಿಗಳನ್ನು ಕೂರಿಸುವುದು, ಪ್ಲಾಸ್ಟಿಕ್ ಬ್ಯಾನರ್ ವಿಪರೀತವಾಗಿ ಬಳಸುವುದು, ಕಿವಿಗಡಚಿಕ್ಕುವ ಧ್ವನಿವರ್ಧಕ ಬಳಕೆ, ಪಟಾಕಿಗಳ ಬಳಕೆ, ವಿಷಕಾರಿ ಬಣ್ಣ ಬಳಸಿದ ಗಣೇಶ, ಬಿದಿರು ಹುಲ್ಲಿನ ಗಣೇಶ ಹಾಗೂ ಪಿಒಪಿ ಗಣೇಶ ಹಾವಳಿ ನಡೆಯುತ್ತಲೇ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ವರ್ಷ ಸಾಗರದಾದ್ಯಂತ ಪರಿಸರ ಮಾಲಿನ್ಯಕಾರಕ ಗಣೇಶ ಮೂರ್ತಿ ಬಳಕೆ ಸಂಪೂರ್ಣ ನಿಷೇಧಿಸಿ ನಿಯಮ ಕಟ್ಟುನಿಟ್ಟಿನ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಟ್ರಸ್ಟ್ ಕಾರ್ಯದರ್ಶಿ ಎಂ.ಸುಕುಮಾರ್, ಗುರುಮೂರ್ತಿ, ಲೋಕೇಶ್, ಮಂಜುನಾಥ ಇದ್ದರು.