ಯೂಟ್ಯೂಬ್ ನೋಡಿ ಕಾಶ್ಮೀರಿ ಸೇಬು ಬೆಳೆದ ರೈತ 
ಜಿಲ್ಲೆ

ಯೂಟ್ಯೂಬ್ ನೋಡಿ ಕಾಶ್ಮೀರಿ ಸೇಬು ಬೆಳೆದ ರೈತ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ತಾನೂ ಏನನ್ನಾದರೂ ವಿಭಿನ್ನವಾಗಿ ಸಾಧಿಸಬೇಕೆಂದು ತನ್ನ ಜಮೀನಿನಲ್ಲಿ ಕಾಶ್ಮೀರಿ ಸೇಬು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿಯ ರೈತ ಬಸವರಾಜು.
ಇರುವ 1.4 ಎಕರೆ ಜಮೀನಿನಲ್ಲಿ ಅನೇಕ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದ ಬಸವರಾಜು,
ವಿಭಿನ್ನ ರೀತಿಯಲ್ಲಿ ಕೃಷಿ ಮಾಡಬೇಕೆಂಬ ಮಹದಾಸೆಯಿಂದ ಯುಟ್ಯೂಬ್ನಲ್ಲಿ ಸೇಬು ಬೆಳೆಯುವ ವಿಡಿಯೋ ನೋಡಿ ಹಿಮಾಯಲದ ಡಾ.ಶರ್ಮಾ ಅವರನ್ನು ಭೇಟಿ ಮಾಡಿ ಅವರು ನೀಡಿದ ಮಾರ್ಗದರ್ಶನದ ಪ್ರಕಾರ ವಿಜಯಪುರದ ರೈತ ಸಚಿನ್ ಬೆಲ್ಲೋಡ ಅವರ ಬಳಿ 442 ಕಾಶ್ಮೀರಿ ಸೇಬು ಗಿಡಗಳನ್ನು ತಂದು ನಾಟಿ ಮಾಡಿದ್ದು, ಇದರಲ್ಲಿ 12 ಗಿಡಗಳು ನಾಶವಾದ್ದರಿಂದ ಮತ್ತೆ 12 ಗಿಡಗಳನ್ನು ನಾಟಿ ಮಾಡಿದ್ದಾರೆ. ಸೇಬು ಗಿಡಗಳಿಗೆ ಯಾವುದೇ ರಾಸಾಯನಿಕ ಔಷಧ ಬಳಸದೇ ಕಪ್ಪು ಮಣ್ಣು, ಹೊಂಗೆ ಹಿಂಡಿ, ಬೇವಿನ ಹಿಂಡಿಯನ್ನು ಹಾಕಿ ಬೆಳೆದಿದ್ದು, ಇವರು ಬೆಳೆದ ಸೇಬಿನ ರುಚಿಯು ಕಾಶ್ಮೀರದಲ್ಲಿ ಬೆಳೆದ ಸೇಬಿನ ರುಚಿಯನ್ನೇ ಹೋಲುತ್ತಿದೆ.
ಈ ಸೇಬು ಗಿಡಗಳನ್ನು ನೋಡಲು ಬರುವ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವ್ಯಾಪಾರಿಗಳು ಕೆ.ಜಿ. ಸೇಬಿಗೆ ರೂ.120 ಕೊಟ್ಟು ತಾಜಾ ಕಾಶ್ಮೀರಿ ಸೇಬು ಖರೀದಿಸಿ ಹೋಗುತ್ತಿದ್ದು ರೈತನ ಆದಾಯ ಹೆಚ್ಚುತ್ತಿದೆ.
ಸೇಬು ಗಿಡಗಳನ್ನು ಬೆಳೆಯಲು 3 ಲಕ್ಷ ಬಂಡವಾಳ ಹಾಕಿದ್ದು, 1200 ಕೆ.ಜಿ ಸೇಬನ್ನು ಸ್ಥಳದಲ್ಲಿಯೇ ಮಾರಾಟ ಮಾಡಿದ್ದಾರೆ, ಅತಿ ಕಡಿಮೆ ದಿನಗಳಲ್ಲಿ ಅಂದರೆ 1 ವರ್ಷ 8 ತಿಂಗಳಿಗೆ ಈ ಬೆಳೆ ಬರುತ್ತದೆ. ಹಾಕಿದ ಬಂಡವಾಳ ಒಂದೇ ಫಸಲಿಗೆ ಸಿಕ್ಕಿರುವುದು ರೈತನ ಮುಖದಲ್ಲಿ ಸಂತಸ ತಂದಿದೆ.


ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಹೆಬ್ಬಾಳದ ಜಿಕೆವಿಕೆಗೆ ಹಲವು ಬಾರಿ ಭೇಟಿ ನೀಡಿ ಇದರ ಬಗ್ಗೆ ಮಾಹಿತಿ ನೀಡುವಂತೆ ಕೇಳಿದೆ. ಆದರೆ ಈ ಬೆಳೆಯ ಬಗ್ಗೆ ಯಾವುದೇ ಅಗತ್ಯ ಮಾಹಿತಿ ಇಲಾಖೆಗಳಿಂದ ಸಿಗಲಿಲ್ಲ. ಹೇಗಾದರೂ ಸರಿ ಸೇಬು ಬೆಳೆ ಬೆಳೆದೇ ಬೆಳೆಯುತ್ತೇನೆಂಬ ನನ್ನ ಹುಮ್ಮಸ್ಸು ನನ್ನ ಸಾಧನೆಗೆ ಕಾರಣವಾಗಿದೆ.
ಬಸವರಾಜು,