ಜಿಲ್ಲೆ

ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮಕ್ಕೆ ಆಗ್ರಹ

ಹರಿಹರ: ತಾಲೂಕಿನ ತುಂಗಭದ್ರಾ ನದಿ ಹಾಗೂ ಸೂಳೆಕೆರೆ ಹಳ್ಳದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪೊ›.ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಘಟಕ ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮಂಗಳವಾರ ಮವಿ ಸಲ್ಲಿಸಿದೆ.

ದಸಂಸ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮನವಿ ಸಲ್ಲಿಸಿ ಮಾತನಾಡಿ, ಧೂಳೆಹೊಳೆ, ಮಳಲಹಳ್ಳಿ, ಪಾಳ್ಯ, ಹರ್ಲಾಪುರ, ಗುತ್ತೂರು, ಸಾರಥಿ, ಚಿಕ್ಕಬಿದರಿ, ಬಿಳಸನೂರು, ರಾಜನಹಳ್ಳಿ, ಹಲಸಬಾಳು ಹಾಗೂ ಇತರೆ ಗ್ರಾಮಗಳ ತುಂಗಭದ್ರ ನದಿಯಲ್ಲಿ ಹಾಗೂ ಹನಗವಾಡಿ ಗ್ರಾಮದ ಇಂಡಸ್ಟ್ರಿಯಲ್ ಏರಿಯಾ ಬಳಿ ಮತ್ತು ಬೆಳ್ಳೂಡಿ ಬಳಿಯ ಸೂಳೆಕೆರೆ ಹಳ್ಳದಲ್ಲಿ ಕಳೆದ ಹತ್ತಾರು ದಿನಗಳಿಂದ ರಾತ್ರಿ ಸಮಯದಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದು ದೂರಿದರು.

ಜೆಸಿಬಿ, ಇಟಾಚಿಯಂತಹ ಬೃಹತ್ ಯಂತ್ರಗಳಿಂದ ನದಿ ಮತ್ತು ಹಳ್ಳದ ಮರಳನ್ನು ರಾತ್ರೋರಾತ್ರಿ ಲಾರಿಗಳಲ್ಲಿ ಸಾಗಿಸುತ್ತಿದ್ದಾರೆ. ತಾಲೂಕಿನ ನದಿ ಹಾಗೂ ಹಳ್ಳದ ಯಾವ ಬ್ಲಾಕ್​ಗಳೂ ಮರಳುಗಾರಿಕೆಗೆ ಟೆಂಡರ್ ಗುತ್ತಿಗೆ ನೀಡಿಲ್ಲದಿದ್ದರೂ ಮರಳನ್ನು ಸಾಗಿಸಲಾಗುತ್ತಿದೆ ಎಂದು ತಿಳಿಸಿದರು.

ಅಕ್ರಮ ಮರಳು ಗಣಿಗಾರಿಕೆಯಿಂದ ನದಿ, ಹಳ್ಳದಲ್ಲಿ ಹತ್ತಾರು ಮೀಟರ್​ಗಳವರೆಗೆ ಗುಂಡಿಗಳು ಸೃಷ್ಟಿಯಾಗುತ್ತಿವೆ. ಕಳೆದ ನಾಲ್ಕು ವರ್ಷಗಳಿಂದ 25ಕ್ಕೂ ಹೆಚ್ಚು ಜನರು ಹಾಗೂ 50ಕ್ಕೂ ಹೆಚ್ಚು ದನಕರು ಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪಿವೆ. ಜಲಚರ ಪ್ರಾಣಿಗಳ ಆವಾಸಕ್ಕೂ ದಕ್ಕೆ ಉಂಟಾಗಿದೆ ಎಂದರು.

ಸರ್ಕಾರದ ಖಜಾನೆಗೆ ಸೇರಬೇಕಿದ್ದ ಕೋಟ್ಯಂತರ ರೂ. ರಾಜಧನ ಇದರಿಂದ ಕೈತಪ್ಪಿ ಹೋಗಿದೆ. ಬರುವ ಮಾರ್ಚ್ ತಿಂಗಳಲ್ಲಿ ತಾಲೂಕಿನ ಏಳೆಂಟು ಮರಳಿನ ಬ್ಲಾಕ್​ಗಳ ಟೆಂಡರ್ ನೀಡುವ ಪ್ರಕ್ರಿಯೆ ನಡೆಯಲಿದ್ದು ಟೆಂಡರ್ ಪಡೆದವರಿಗೆ ನಿರೀಕ್ಷಿತ ಮರಳು ಸಿಗದೆ ನಷ್ಟವಾಗುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ಅಕ್ರಮ ಮರಳುಗಾರಿಕೆ ತಡೆದು ಆರೋಪಿತರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಡಾರನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪರಶುರಾಮ, ಭಾನುವಳ್ಳಿ ಚೌಡಪ್ಪ, ಕಡ್ಲೆಗೊಂದಿ ತಿಮ್ಮಣ್ಣ, ಶಿವಪ್ಪ, ನಿಜಗುಣ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಅಧ್ಯಕ್ಷ ಎಂ.ಇಲಿಯಾಸ್ ಅಹ್ಮದ್ ಇದ್ದರು.