ಜಿಲ್ಲೆ

ರೈಲ್ವೇ ಇಲಾಖೆ ಬೇಡಿಕೆಗಳ ಬಗ್ಗೆ ಸಚಿವರಿಗೆ ಮನವಿ

ಉಡುಪಿ: ಮಡಗಾಂವ್​&ಮಂಗಳೂರು ವಂದೇ ಭಾರತ್​ ಎಕ್ಸ್​ ಪ್ರೆಸ್​ ರೈಲು ಸ್ಲೀಪರ್​ ಕ್ಲಾಸಿನೊಂದಿಗೆ ಬೆಂಗಳೂರು ಹಾಗೂ ಮುಂಬೈಗೆ ವಿಸ್ತರಣೆ, ಅಂಬಾಗಿಲು ಪೆರಂಪಳ್ಳಿ ಮತ್ತು ಚಾಂತಾರು ರೈಲ್ವೆ ಮೇಲ್ಸೇತುವೆ ಅಗಲೀಕರಣ ಸೇರಿದಂತೆ ರೈಲ್ವೇ ಇಲಾಖೆಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ರೈಲ್ವೇ ಹಾಗೂ ಜಲ ಶಕ್ತಿ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಶಾಸಕ ಯಶ್​ ಪಾಲ್​ ಸುವರ್ಣ ಮನವಿ ಮಾಡಿದರು.

ಪ್ರವಾಸಿ ಮಂದಿರಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ಇಂದ್ರಾಳಿ ರೈಲ್ವೇ ಸೇತುವೆ ಬಳಿ ರಸ್ತೆ ದಾಟುವ ಪಾದಚಾರಿಗಳಿಗಾಗಿ ಫುಟ್​ ಬ್ರಿಡ್ಜ್​ ನಿಮಾರ್ಣ, ಬೆಂಗಳೂರು ಕಾರವಾರ ರೈಲಿನ ಬೆಂಗಳೂರಿನಿಂದ ಹೊರಡುವ ಸಮಯವನ್ನು ರಾತ್ರಿ 8.30ಕ್ಕೆ ನಿಗದಿ ಮಾಡಿ ಸಂಚಾರ ಅವಧಿಯನ್ನು ಕಡಿತಗೊಳಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಶಿರಾಡಿ ಘಾಟ್​ ಅಗಲೀಕರಣ ಸಂದರ್ಭದಲ್ಲಿ ಮೆಟ್ರೋ ಮಾದರಿಯಲ್ಲಿ ಹೊಸ ರೈಲ್ವೇ ಹಳಿಗಳ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಕೆ ಮಾಡುವಂತೆ ಮನವಿ ಮಾಡಿದರು.

ಅಮೃತ ಯೋಜನೆಯಡಿ ಆಯ್ಕೆಯಾದ ಉಡುಪಿ ಇಂದ್ರಾಳಿ ರೈಲ್ವೇ ನಿಲ್ದಾಣವನ್ನು ಶೀಘ್ರವಾಗಿ ಅಭಿವೃದ್ಧಿಗೊಳಿಸಬೇಕು. ನಿಲ್ದಾಣದಲ್ಲಿ ಹೆಚ್ಚುವರಿ ಭದ್ರತೆಗೆ ಅಗತ್ಯ ಪೊಲೀಸ್​ ಸಿಬ್ಬಂದಿ ನಿಯೋಜಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಸಚಿವ ಸೋಮಣ್ಣ ಜಿಲ್ಲೆಯ ರೈಲ್ವೇ ಸಂಬಂಧಿಸಿದ ಬೇಡಿಕೆಗಳ ಮನವಿಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಕ್ರಮ ವಹಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಪು ಶಾಸಕ ಸುರೇಶ್​ ಶೆಟ್ಟಿ ಗುರ್ಮೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್​ ಅಮೀನ್​, ಗ್ರಾಮಾಂತರ ಅಧ್ಯಕ್ಷ ರಾಜೀವ್​ ಕುಲಾಲ್​, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್​ ಆಚಾರ್ಯ ಕಪ್ಪೆಟ್ಟು, ಮಹಿಳಾ ಮೋರ್ಚಾದ ನಿಕಟಪೂರ್ವ ಜಿಲ್ಲಾಧ್ಯೆ ವೀಣಾ ಶೆಟ್ಟಿ, ಪ್ರಮುಖರಾದ ಜಯಕರ ಸನಿಲ್​, ಆನಂದ ಸುವರ್ಣ, ಸಂತೋಷ್​ ಆಚಾರ್ಯ, ಗುರುರಾಜ್​ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.