ಜಯಪುರ: ಜಯಪುರ ಗ್ರಾಪಂ ಮಾಡಿರುವ ತೆರಿಗೆ ಪರಿಷ್ಕರಣೆ ಕಾನೂನು ಬದ್ದವಾಗಿದ್ದು, ಸಾರ್ವಜನಿಕರ ಮನವಿ ಮೇರೆಗೆ ತೆರಿಗೆ ಕಡಿಮೆ ಮಾಡುವಂತೆ ಶೇ.50 ಕಡಿಮೆ ಮಾಡಲು ಈಗಾಗಲೇ ಸರ್ಕಾರಕ್ಕೆ ಆಡಳಿತ ಮಂಡಳಿ ಪತ್ರ ಬರೆದಿದೆ. ಈ ವಿಚಾರ ತಿಳಿದಿದ್ದರೂ ರಾಜಕೀಯ ಪ್ರೇರಿತವಾಗಿ ಜಯಪುರ ಬಂದ್‌ಗೆ ಕರೆಕೊಡಲಾಗಿದೆ ಎಂದು ಜಯಪುರ ಗ್ರಾಪಂ ಅಧ್ಯಕ್ಷ ಸಂಪತ್ ಕುಮಾರ್ ದೂರಿದ್ದಾರೆ.
ಈ ಬಗ್ಗೆ ಶುಕ್ರವಾರ ಜಯಪುರ ಗ್ರಾಪಂ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ, ಸಬ್‌ರಿಜಿಸ್ಟರ್ ಕಚೇರಿ ಆಸ್ತಿ ಮೌಲ್ಯದ ಆಧಾರದಲ್ಲಿ ಸರ್ಕಾರದ ನಿಯಮಕ್ಕೆ ಒಳಪಟ್ಟಂತೆ, ಗ್ರಾಪಂ ಕಟ್ಟಡ ಹಾಗೂ ವಾಣಿಜ್ಯ ಮಳಿಗೆಗಳು ಮತ್ತು ನಿವೇಶನಗಳ ತೆರಿಗೆ ಜಾಸ್ತಿ ಮಾಡಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಕೊಪ್ಪ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ತೆರಿಗೆ ಪರಿಷ್ಕರಣೆ ಕಾನೂನು ಬದ್ದವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಸಾರ್ವಜನಿಕರು ತೆರಿಗೆ ಕಡಿಮೆ ಮಾಡಿ ಎಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಶೇ.50 ತೆರಿಗೆ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿ ಗ್ರಾಪಂ ನಿರ್ಣಯ ಕೈಗೊಂಡು ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಚರ್ಚಿಸಲು ಇಂದು ವರ್ತಕರ ಸಂಘದ ಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಭೆ ಕರೆದರೆ ಯಾರೊಬ್ಬರು ಸಭೆಗೆ ಹಾಜರಾಗಿಲ್ಲ. ವಿನಾಕಾರಣ ಬಂದ್ ಹಾಗೂ ಪ್ರತಿಭಟನೆಗೆ ವರ್ತಕರ ಸಂಘ ಕರೆ ನೀಡಿದೆ. ಜಯಪುರ ಗ್ರಾಪಂ ಅಭಿವೃದ್ಧಿ ಸಹಿಸದ ಕೆಲವು ರಾಜಕೀಯ ಮುಖಂಡರ ಷಡ್ಯಂತ್ರದ ಭಾಗವಾಗಿದೆ. ಈ ಬಂದ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಹೊರತು ಅನುಕೂಲವಾಗದು. ಆದ್ದರಿಂದ ಸಾರ್ವಜನಿಕರು ಈ ಬಂದ್‌ಗೆ ಬೆಂಬಲ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಉಪಾಧ್ಯಕ್ಷೆ ಜಯ ಮುರುಗೇಶ್, ಮಾಜಿ ಅಧ್ಯಕ್ಷೆ ರಮ್ಯಾ, ಸದಸ್ಯರಾದ ಪ್ರವೀಣ್, ಕರುಣಾಕರ, ಶ್ರೀನಿವಾಸ್ ಇತರರಿದ್ದರು.