ವಿಜಯವಾಣಿ ಸುದ್ದಿಜಾಲ ಮಂಡ್ಯ
ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ಗುರುವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಭೂ ಸುಧಾರಣಾ ಕಾಯ್ದೆ 1961ಕ್ಕೆ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಸೆಕ್ಷನ್ 64, 79ಎ, 29(ಬಿ), 79(ಸಿ) ಮತ್ತು 80ನ್ನು ನಿಷ್ಕ್ರಿಯಗೊಳಿಸಿ ಒಬ್ಬ ವ್ಯಕ್ತಿ 214 ಎಕರೆ ಖುಷ್ಕಿ ಭೂಮಿ ಹೊಂದಲು ಅವಕಾಶ ಮಾಡಿಕೊಟ್ಟಿದೆ. ಕೃಷಿಯೇತರ ಮೂಲಗಳಿಂದ 25 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿರುವವರೂ ಸಹ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಡುವ ಮೂಲಕ ಸರ್ಕಾರ ಬಂಡವಾಳಶಾಹಿಗಳ ಪರ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ರೈತರ ಹಿತ ಕಾಪಾಡುವ ಉದ್ದೇಶದಿಂದ ತರಲಾಗಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೂ ತಿದ್ದುಪಡಿ ತಂದು ವ್ಯಾಪಾರಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅನುಮತಿ ನೀಡಿ ರೈತರನ್ನು ಸುಲಿಗೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇನ್ನು ಕಾರ್ಮಿಕ ಇಲಾಖೆಗೂ ಸಹ ತಿದ್ದುಪಡಿ ತಂದು ಕಾರ್ಮಿಕರಿಗೆ ಅತಂತ್ರ ಮತ್ತು ಅಭದ್ರತೆಯ ಪರಿಸ್ಥಿತಿ ನಿರ್ಮಾಣ ಮಾಡಿದೆ. ಕಾರ್ಮಿಕರ ತುಟ್ಟಿಭತ್ಯೆಯ ಹೆಚ್ಚಳವನ್ನು ತಡೆದು ನಿರ್ಬಂಧಿಸಲಾಗಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕರೊನಾದಿಂದಾಗಿ ರಾಜ್ಯದ ಜನತೆ ಜೀವನ್ಮರಣದ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ. ರಾಜ್ಯದಲ್ಲಿ ಆರೋಗ್ಯ ಸೇವೆ ಕುಸಿದು ಬಿದ್ದಿದ್ದು, ಕರೊನಾ ಸೋಂಕಿತರು ಆಸ್ಪತ್ರೆಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇತರೆ ರೋಗಗಳಿಂದ ಬಾದಿತರಾದವರಿಗೆ ಚಿಕಿತ್ಸೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ದೂರಿದರು.
ತಮಿಳುನಾಡು, ತೆಲಂಗಾಣ ಸರ್ಕಾರ 4 ಲಕ್ಷ ರೂ. ನೀಡಿ ವೆಂಟಿಲೇಟರ್ ಖರೀದಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ 18 ಲಕ್ಷ ರೂ. ನೀಡಿದೆ. ಪಿಪಿಇ ಕಿಟ್‌ಗಳಿಗೆ 300 ರೂ. ಬದಲು 2,049 ರೂ. ನೀಡಿ ಖರೀದಿಸಿದೆ. ಸ್ಯಾನಿಟೈಸರ್, ಆರ್‌ಟಿ, ಟಿಸಿಆರ್, ಆರ್‌ಎನ್‌ಎ ಕಿಟ್‌ಗಳ ಖರೀದಿ, ಮಾಸ್ಕ್, ಆಕ್ಸಿಜನ್ ಉಪಕರಣ, ಥರ್ಮಲ್ ಸ್ಕ್ರೀನಿಂಗ್ ಖರೀದಿಯಲ್ಲೂ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಾಯ್ದೆ ತಿದ್ದುಪಡಿ ಆದೇಶ ಹಿಂಪಡೆಯಬೇಕು. ಕರೊನಾ ನಿಯಂತ್ರಣದ ವಿಚಾರದಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆ ನಡೆಯಬೇಕು. ಅತಿವೃಷ್ಟಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ವಿಲವಾಗಿರುವ ರಾಜ್ಯ ಸರ್ಕಾರ, ಕಳೆದ ವರ್ಷ ಘೋಷಿಸಿದ ಪರಿಹಾರದ ಮೊತ್ತವೆಷ್ಟು? ಎಷ್ಟು ಜನರಿಗೆ ವಿತರಿಸಲಾಗಿದೆ? ಎಷ್ಟು ಮನೆಗಳನ್ನು ಕಟ್ಟಿಕೊಡಲಾಗಿದೆ ಎಂಬ ಲೆಕ್ಕ ಕೊಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ. ರಾಮು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡರಾದ ರವಿಕುಮಾರ್ ಗಣಿಗ, ಎಂ.ಎಸ್.ಚಿದಂಬರ್ ಇತರರಿದ್ದರು.
ಫೋಟೋ:(20-08-ಎಂಡಿವೈ-ಕಾಂಗ್ರೆಸ್ ಪ್ರೊಟೆಸ್ಟ್)
ಮಂಡ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು ಇತರರಿದ್ದರು.
----------------------