ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾಯಿಸಿ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿ ನಿಯೋಗ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಹಾಗೂ ಎಸ್.ಎಲ್.ಭೋಜೇಗೌಡ ಅವರಿಗೂ ಸಮಿತಿ ಮನವಿ ನೀಡಿದೆ. ದ.ಕ. ಜಿಲ್ಲೆಯನ್ನು ಮಂಗಳೂರು ಜಿಲ್ಲೆಯನ್ನಾಗಿ ಮಾಡಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಜಿಲ್ಲೆಯ ಹೆಸರು ಘೋಷಣೆ ಮಾಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಐವನ್ ಡಿಸೋಜ ತಿಳಿಸಿದರು.
ಸಮಿತಿ ಪ್ರಮುಖರಾದ ಅಕ್ಷಿತ್ ಸುವರ್ಣ, ಕಿರಣ್ ಕೋಡಿಕಲ್, ದಯಾನಂದ ಜಿ.ಕತ್ತಲ್ಸಾರ್, ಉದಯ್ ಪೂಂಜ ತಾರಿಪಾಡಿಗುತ್ತು, ಗೀತಾ ಲಕ್ಷ್ಮೀಶ್, ರೋಷನ್ ರೊನಾಲ್ಡ್, ರತೀಶ್ ಕರ್ಕೇರ, ಭರತ್ ಬಳ್ಳಾಲ್ಭಾಗ್, ನಿತೀಶ್ ಪೂಜಾರಿ, ಯೋಗೀಶ್ ಶೆಟ್ಟಿ ಜೆಪ್ಪು, ಸುಶಾಂತ್, ಅಭಿ, ಪ್ರಶಾಂತ್ ಮತ್ತಿತರರು ಇದ್ದರು.
ಬೆಂಗಳೂರು ಬಿಟ್ಟರೆ ರಾಜ್ಯದಲ್ಲೇ ಅತಿ ಹೆಚ್ಚು ಆರ್ಥಿಕ ಚಟುವಟಿಕೆ ಇರುವ, ಶೈಕ್ಷಣಿಕ ಸಾಧನೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಜನರ ಭಾವನೆಗೆ ಬೆಲೆ ಕೊಟ್ಟು ರಾಜ್ಯ ಸರ್ಕಾರ ಮಂಗಳೂರು ಎಂದು ಮರುನಾಮಕರಣ ಮಾಡಬೇಕು. ಹಿಂದೆ ರಾಜ್ಯ, ದೇಶದ ಹಲವು ಜಿಲ್ಲೆ, ಪ್ರದೇಶಗಳ ಹೆಸರುಗಳನ್ನು ಆಯಾ ವ್ಯಾಪ್ತಿಯ ಜನರ ಭಾವನೆ, ಬೇಡಿಕೆಗಳಿಗೆ ಅನುಗುಣವಾಗಿ ಬದಲಾಯಿಸಲಾಗಿತ್ತು. ದಕ್ಷಿಣ ಕನ್ನಡ ವಿಶಿಷ್ಟ ಸಂಸ್ಕೃತಿ, ಭಾಷೆ, ಆರ್ಥಿಕ ವ್ಯವಹಾರಗಳ ಮೂಲಕ ಹೆಸರಾಗಿದೆ. ಮಂಗಳೂರು ಎಂದು ಹೆಸರನ್ನು ಇಡಲು ಇದು ಸಕಾಲ. - ಎಸ್.ಎಲ್.ಭೋಜೇಗೌಡ, ವಿಧಾನಪರಿಷತ್ ಸದಸ್ಯ https://www.vijayavani.net/department-takes-action-against-sewage-flow https://www.vijayavani.net/there-is-no-doctor-in-shirur-government-hospital