ವಿಜಯಪುರ: ಹೆಚ್ಚುತ್ತಿರುವ ಭೂಕಂಪನದ ಆತಂಕ ನಿವಾರಣೆ, ಬೀದಿ ನಾಯಿಗಳ ಹಾವಳಿ ತಡೆ ಹಾಗೂ ಕೋನೋ ಕಾರ್ಪಸ್ ಗಿಡಗಳನ್ನು ನಿಷೇಧಿಸುವುದು ಸೇರಿದಂತೆ ವಿವಿಧ ಮಹತ್ವದ ವಿಚಾರಗಳನ್ನಿಟ್ಟುಕೊಂಡು ಸೋಮವಾರ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರೊಂದಿಗೆ ಚರ್ಚಿಸಿದ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ನೇತೃತ್ವದ ನಿಯೋಗ ಕೂಡಲೇ ಜನರಲ್ಲಿ ಮನೆ ಮಾಡಿರುವ ಭಯ ಹೋಗಲಾಡಿಸಬೇಕೆಂದು ಮನವಿ ಮಾಡಿತು.
ನಗರದಲ್ಲಿ ಭೂಕಂಪನಗಳು ಮರುಕಳಿಸುತ್ತಲೇ ಇವೆ, 2021ರಿಂದ 2025 ನವೆಂಬರ್ 4ರ ವರೆಗೆ 54 ಸಲ ಲಘು ಭೂಕಂಪನ ಸಂಭವಿಸಿದೆ. 2025ರಲ್ಲಿ 6 ಭಾರಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕನಿಷ್ಠ 1.2 ರಿಂದ ಗರಿಷ್ಠ 4.4 ವರೆಗೂ ತೀವ್ರತೆ ದಾಖಲಾಗಿದೆ. ಇದರಿಂದ ಜನತೆ ಆತಂಕಗೊಂಡಿದ್ದಾರೆ, ಕೂಡಲೇ ಸಾರ್ವಜನಿಕರ ಆತಂಕ ದೂರ ಮಾಡಲು ತಜ್ಞರ ತಂಡ ಕರೆಯಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಬೀದಿನಾಯಿಗಳ ಉಪಟಳ ಅಧಿಕವಾಗಿದೆ, ಚಿಕ್ಕ ಮಕ್ಕಳು, ಮಹಿಳೆಯರು, ವೃದ್ದರು ಅನೇಕರಿಗೆ ಬೀದಿ ನಾಯಿಗಳು ಕಡಿದು ಗಾಯಗೊಳಿಸಿವೆ. ಹೀಗಾಗಿ ಬೀದಿನಾಯಿಗಳನ್ನು ನಿಯಂತ್ರಿಸಬೇಕು ಎಂದರು.
ನಗರದ ಎಪಿಎಂಸಿ ಆವರಣಲ್ಲಿ ಅಗ್ನಿ ನಂದಿಸುವ ಇನ್ನೊಂದು ವಾಹನ ನಿಲುಗಡೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮಂಡಿಸಿದರು.
ವಿಷಕಾರಿಯಾದ ಕೋನೋ ಕಾರ್ಪಸ್ ಗಿಡಗಳನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು. ಈ ಸಸಿ ಬಿಡುವ ಹೂವಿನಿಂದ ಹಿಟಮೈನ್ ಎಂಬ ಅಂಶ ಬಿಡುಗಡೆಯಾಗಿ ಅಸ್ತಮಾ ಮೊದಲಾದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆಂದು ತಿಳಿಸಿದರು.
ಮುಖಂಡರಾದ ಕೃಷ್ಣಾ ಗುನ್ನಾಳಕರ, ಆನಂದ ಕುಲಕರ್ಣಿ, ಬಸವರಾಜ ಬೈಚಬಾಳ, ಸಂದೀಪ ಪಾಟೀಲ, ವಿರೇಶ ಗೊಬ್ಬೂರ, ಕುಮಾರ ಕಟ್ಟಿಮನಿ, ಚಿನ್ನು ಚಿನಗುಂಡಿ, ಸುನಂದಾ ಪಾಟೀಲ ಮತ್ತಿತರರಿದ್ದರು.