ಹರಿಹರ: ದಿನ ಬಳಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಶನಿವಾರ ಆಮ್ ಅದ್ಮಿ ಪಕ್ಷ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗುರು ಬಸವರಾಜ್ ಅವರಿಗೆ ಮನವಿ ಸಲ್ಲಿಸಿತು.
ಜಮಾವಣೆಯಾದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.
ಈ ವೇಳೆ ತಾಲೂಕು ಅಧ್ಯಕ್ಷ ಜಿ.ಎಚ್. ಬಸವರಾಜ್ ಮಾತನಾಡಿ, ಕೇಂದ್ರ ಸರ್ಕಾರದ ಜಿಎಸ್ಟಿ ನೀತಿ, ಪೆಟ್ರೋಲ್ ಮತ್ತು ಡೀಸೆಲ್, ಟೋಲ್, ರೈಲು ದರ ಸೇರಿ ವಿವಿಧ ಅನೇಕ ಸಾಮಗ್ರಿಗಳ ಬೆಲೆ ಏರಿಸಿ ಜನಸಾಮಾನ್ಯರ ಜೀನವವನ್ನು ದುಸ್ತರವಾಗಿಸಿರುವುದನ್ನು ನಮ್ಮ ಪಕ್ಷ ವಿರೋಧಿಸುತ್ತದೆ ಎಂದರು.
ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಯೋಜನೆಗಳನ್ನು ಸಕಾರಗೊಳಿಸಲು ಹಾಲು, ವಿದ್ಯುತ್, ಬಸ್, ಮೆಟ್ರೋ, ಮುದ್ರಾಂಕ ಶುಲ್ಕ ದುಪ್ಪಟ್ಟು ಮಾಡಿ ಮಹಿಳೆಯರಿಗೆ 2 ಸಾವಿರ ನೀಡಿ ಕುಟುಂಬದಿಂದ ಹತ್ತು ಸಾವಿರ ರೂ. ದೋಚುವ ಮೂಲಕ ಮತದಾರರಿಗೆ ದ್ರೋಹ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿಗಳನ್ನು ರದ್ದುಪಡಿಸಿ ಜನಸಾಮಾನ್ಯರನ್ನು ದರ ಏರಿಕೆಯಿಂದ ಮುಕ್ತಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ನಿರಂತರ ಹೋರಾಟ ಮಾಡುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಎಸ್.ಕೆ. ಆದಿಲ್ಖಾನ್ ಎಚ್ಚರಿಕೆ ನೀಡಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಯೂಸೂಫ್, ನಗರ ಘಟಕದ ಅಧ್ಯಕ್ಷ ಬಿ. ಮಲ್ಲೇಶ್, ಮಹಿಳಾ ವಿಭಾಗದ ಅಧ್ಯಕ್ಷೆ ರೇಖಾ ಬಿ. ಆಡೂರು, ಮುಖಂಡರಾದ ಎಸ್.ಪಿ. ರೋಹಿತ್, ಭಾಷಾ, ಕೆ. ರವಿಂದ್ರ, ಮುಸ್ತಾಫಾ, ವೀರಭದ್ರಪ್ಪ ನಾಗೇನಹಳ್ಳಿ, ಗಂಗಮ್ಮ, ಮುಸ್ತಫ್ ಹಾಗೂ ಇತರರಿದ್ದರು.