ಜಿಲ್ಲೆ

ತೈಲ ಬೆಲೆ ಏರಿಕೆ ತಡೆಯಲು ಮನವಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಏಕಾಏಕಿ ಪೆಟ್ರೋಲ್​, ಡೀಸೆಲ್​ ದರ ಏರಿಕೆ ಮಾಡಿರುವುದನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ಥಿಂಕರ್ಸ್​ ಫೋರಂ ಅಧ್ಯಕ್ಷ ಪಿ.ಎಚ್​. ನೀರಲಕೇರಿ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಭಾನುವಾರ ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಅವರನ್ನು ಭೇಟಿ ಮಾಡಿರುವ ನೀರಲಕೇರಿ, ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಪೆಟ್ರೋಲ್​, ಡೀಸೆಲ್​ ಬೆಲೆಯನ್ನು 3 ರೂ.ಗೆ ಏರಿಕೆ ಮಾಡಿದ್ದು ಖಂಡನೀಯ. ಕಾಂಗ್ರೆಸ್​ ಅಧಿಕಾರಕ್ಕೇರುವ ಕಾರಣಕ್ಕೆ ಪಂಚ ಭಾಗ್ಯದ ಮೋಡಿ ಮಾಡಿ ರಾಜ್ಯದ ಮತದಾರರನ್ನು ದಿಕ್ಕು ತಪ್ಪಿಸಿದೆ. ದಿನ ಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಸರಣಿ ರೂಪದಲ್ಲಿ ಏರಿಸಲಾಗುತ್ತಿದೆ. ಇದೀಗ ಪೆಟ್ರೋಲ್​, ಡೀಸೆಲ್​ ದರಗಳನ್ನು ಏರಿಸಿದ್ದರಿಂದ ಸಹಜವಾಗಿ ಸರಕು ಸಾಗಾಣಿಕೆ ಹಾಗೂ ಸಾರಿಗೆ ದರಗಳೂ ವಿಪರೀತ ಹೆಚ್ಚಳ ಕಂಡು ದಿನಬಳಕೆ ಅಗತ್ಯ ವಸ್ತುಗಳ ಬೆಲೆಯೂ ಏರಲಿವೆ.
ಪೆಟ್ರೋಲಿಯಂ ಕಚ್ಚಾ ತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ರಾಜ್ಯ ಸರ್ಕಾರ ಹೇಳಿದಂತೆ ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ. ಕರ್ನಾಟಕ ದಿವಾಳಿ ಸಹ ಆಗಿಲ್ಲ. ಆದಾಗ್ಯೂ ದಿಢೀರನೆ ಬೆಲೆ ಏರಿಕೆ ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದ್ದಾರೆ. ಪದೇ ಪದೇ ಬೆಲೆ ಏರಿಕೆಯ ಬರೆ ಹಾಕುವುದೇ ಕಾಂಗ್ರೆಸ್​ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್​ ಎಂಬಂತಾಗಿದೆ. ಕೂಡಲೇ ತೈಲ ಬೆಲೆ ಏರಿಕೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳುವಂತೆ ರಾಜ್ಯಪಾಲರು ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.