ಬೇಲೂರು: ಇತ್ತೀಚೆಗೆ ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಮಿತಿ ಮೀರಿದ್ದು, ಅವರನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘಟನೆಗಳ ಒಕ್ಕೂಟದಿಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡುರವರಿಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಪತ್ರಕರ್ತರೆಂದು ಹೇಳಿಕೊಂಡ ಕೆಲವರು ಸರ್ಕಾರಿ ಇಲಾಖೆ ಅಧಿಕಾರಿಗಳ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದೆ. ಇದರಿಂದ ನೈಜ ಪತ್ರಕರ್ತರ ಗೌರವಕ್ಕೆ ಧಕ್ಕೆಯಾಗುತ್ತಿದೆ. ಅಲ್ಲದೆ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅಧಿಕೃತವಾಗಿ ನೋಂದಣಿಯಾಗದ ಪತ್ರಿಕಾ ವರದಿಗಾರರನ್ನು ಪರಿಶೀಲಿಸಿ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜತೆಗೆ ಅನಧಿಕೃತವಾಗಿ ವಾಹನಗಳ ಮೇಲೆ ಪ್ರೆಸ್ ಎಂದು ನಾಮಫಲಕ ಹಾಕಿಕೊಂಡು ಓಡಾಡುತ್ತಿರುವುದು ಬೇಲೂರಿನಲ್ಲಿ ಹೆಚ್ಚಾಗಿ ಕಂಡು ಬರುತಿದ್ದು, ಅವರ ವಿರುದ್ಧವೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ಚಿಕ್ಕಬ್ಯಾಡಿಗೆರೆ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಹಾಗೂ ದಲಿತ ಮುಖಂಡ ಪರ್ವತಯ್ಯ, ಪುರಸಭಾ ಮಾಜಿ ಸದಸ್ಯ ಮಂಜುನಾಥ್, ದಲಿತ ಮುಖಂಡರಾದ ಎಂ.ಜಿ.ವೆಂಕಟೇಶ್, ರಮೇಶ್, ಎಂ.ಜಿ.ವೆಂಕಟೇಶ್, ನಿಂಗರಾಜು, ಯೋಗೇಶ್, ಶಂಬುಗನಹಳ್ಳಿ ಬಾಬು, ತೀರ್ಥಕುಮಾರ್, ದೇವಿಹಳ್ಳಿ ಕುಮಾರ ಸೇರಿದಂತೆ ಇತರರಿದ್ದರು.