ಜಿಲ್ಲೆ

ನೀರು ನಿಲ್ಲುವ ಸಮಸ್ಯೆ ಪರಿಹಾರಕ್ಕೆ ಮನವಿ: ಹೆದ್ದಾರಿ ಕಾಮಗಾರಿಯ ಅಡ್ಡಪರಿಣಾಮ

Avinash R

ಉಪ್ಪಿನಂಗಡಿ: ಹೆದ್ದಾರಿ ಅಗಲೀಕರಣ ಕಾಮಗಾರಿಯ ಪರಿಣಾಮವಾಗಿ ನೆಕ್ಕಿಲಾಡಿಯ ಖಾಸಗಿ ಜಾಗವೊಂದರಲ್ಲಿ ತ್ಯಾಜ್ಯ ನೀರು ನಿಲ್ಲುತ್ತಿದ್ದು, ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಆದ್ದರಿಂದ ಆ ಪ್ರದೇಶವನ್ನು ಮುಚ್ಚಿಸಲು ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು 34 ನೆಕ್ಕಿಲಾಡಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಇತ್ತೀಚೆಗೆ ಮನವಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಖಾಸಗಿ ಜಾಗವಿದ್ದು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಹೆದ್ದಾರಿಯ ಚರಂಡಿ ಈ ಪ್ರದೇಶಕ್ಕಿಂತ ಮೇಲ್ಮಟ್ಟದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಈ ಜಾಗದಲ್ಲಿ ನೀರು ತುಂಬಿ ಕೆರೆಯಂತಾಗಿದ್ದು, ಗ್ರಾಮದಲ್ಲಿ ಅನಾರೋಗ್ಯಕರ ಸ್ಥಿತಿಗೆ ಕಾರಣವಾಗಿದೆ. ಮನವಿ ಮೇರೆಗೆ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ಚರಂಡಿಯನ್ನು ಇನ್ನಷ್ಟು ತಗ್ಗಿಸಿದ್ದು, ಮೋರಿ ಹಾಕಿಸಿಕೊಟ್ಟಿದ್ದಾರೆ. ಆದರೂ ಒಂದಷ್ಟು ನೀರು ನಿಲ್ಲುತ್ತಿದೆ. ಇನ್ನು ಇಲ್ಲಿ ಚರಂಡಿ ತಗ್ಗಿಸಲು ಸಾಧ್ಯವಿಲ್ಲ. ಇದರಿಂದಾಗಿ ಈ ಗುಂಡಿ ಪ್ರದೇಶಕ್ಕೆ ಮಣ್ಣು ತುಂಬಿಸುವುದೇ ಈ ಸಮಸ್ಯೆ ಪರಿಹಾರಕ್ಕಿರುವ ಏಕೈಕ ಮಾರ್ಗ. ಆದ್ದರಿಂದ ಈ ಬಗ್ಗೆ ಗ್ರಾ.ಪಂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಗ್ರಾ.ಪಂ ಅಧ್ಯಕ್ಷೆ ಸುಜಾತ ರೈ ಅವರಿಗೆ ಮನವಿ ನೀಡಿದ ನಿಯೋಗದಲ್ಲಿ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಬೂತ್ ಅಧ್ಯಕ್ಷ ಅಬ್ದುಲ್ ಖಾದರ್, ಇಸಾಕ್, ಗ್ರಾ.ಪಂ ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ಕಾಂಗ್ರೆಸ್ ಪ್ರಮುಖರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜಯಶೀಲ ಶೆಟ್ಟಿ, ಶರೀಕ್ ಅರಪ್ಫಾ, ರಿಜ್ವಾನ್, ಹರೀಶ್, ಅಣ್ಣು ಮತ್ತಿತರರಿದ್ದರು.