ಕಾರವಾರ:ಅರಣ್ಯ ಅತಿಕ್ರಮಣ ಮಾಡಿ ಸಾಗುವಳಿ, ಹಾಗೂ ಮನೆ ಕಟ್ಟಿಕೊಂಡಿರುವವರಿಗೆ ಶೀಘ್ರ ಹಕ್ಕು ಪತ್ರ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರ ಮೂಲಕ ಸಂಘದ ಸದಸ್ಯರು ಮುಖ್ಯಮಂತ್ರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸುಮಾರು 14 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿರುವ 60 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಉಪವಿಭಾಗದ ಹಂತದಲ್ಲಿ ತಿರಸ್ಕರಿಸಲಾಗಿದೆ. ಅವರು ಜಿಲ್ಲಾ ಹಂತಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಜಿಪಿಎಸ್ ಮಾಡಲಾಗಿದೆ. ಆದರೆ, ಹಕ್ಕು ಪತ್ರ ನೀಡುತ್ತಿಲ್ಲ. ಅತಿಕ್ರಮಣ ಜಾಗದಲ್ಲಿ ಇರುವ ಮನೆಗಳ ರಿಪೇರಿಗೆ, ಹೊಸ ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಕೆಲವು ಬಾರಿ ಸಾಗುವಳಿಗೂ ಅರಣ್ಯ ಇಲಾಖೆ ತೊಂದರೆ ನೀಡುತ್ತಿದೆ ಎಂದು ದೂರಿದ್ದಾರೆ.
2 ಸಾವಿರದಷ್ಟು ಎಸ್‌ಟಿ ಕುಟುಂಬಗಳಿಗೆ ಅರಣ್ಯಹಕ್ಕು ನೀಡಿ ಕಣ್ಣೊರೆಸುವ ತಂತ್ರ ಮಾಡಲಾಗಿದೆ. ಅತಿಕ್ರಮಣ ಸಕ್ರಮಕ್ಕೆ 75 ವರ್ಷದ ಹಿಂದಿನ ದಾಖಲೆ ಎಂದರೆ, ಬ್ರಿಟಿಷ್ ಕಂಪನಿ ಅವಧಿಯ ದಾಖಲೆ ಕೇಳಲಾಗುತ್ತಿದೆ.
ಅಧಿಕಾರಿಗಳು, ಮಂತ್ರಿಗಳು ಬದಲಾದಂತೆ ಹೊಸ ವರಸೆಗಳು ಹುಟ್ಟಿಕೊಳ್ಳುತ್ತಿವೆ. ಅರ್ಜಿ ಸಲ್ಲಿಕೆಯ ನಂತರ ಹಲವು ವಿಧಾನಸಭಾ ಚುನಾವಣೆಗಳು, ಹಲವು ಲೋಕಸಭಾ ಚುನಾವಣೆಗಳು ಬಂದವು.
ಎಲ್ಲ ಚುನಾವಣೆಗಳ ಸ್ಪರ್ಧಿಗಳ ಭರವಸೆ ಅರಣ್ಯ ಅತಿಕ್ರಮಣ ಸಕ್ರಮಗೊಳಿಸುವುದಾಗಿದೆ. ಆದರೆ, ಇದುವರೆಗೂ ಈಡೇರಿಲ್ಲ ಎಂದು ದೂರಲಾಗಿದೆ.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ, ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ಅಂಕೋಲಾ ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಸಮಿತಿ ಸದಸ್ಯರಾದ ಉದಯ ನಾಯ್ಕ ಹೊಸಗದ್ದೆ, ಗಣೇಶ ವೆಂ. ಪಟಗಾರ, ಶಿವರಾಮ ಪಟಗಾರ ಇತರರು ಇದ್ದರು.