ಜಿಲ್ಲೆ

ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರಿಗೆ ಮನವಿ

ಆರ್.ಕೃಷ್ಣ

ಮೈಸೂರು: ತಿಲಕ್‌ನಗರ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಅರೆಬರೆಯಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ಪರಿಸರವಾದಿ ವಸಂತಕುಮಾರ್ ಮೈಸೂರು ಮಠ್ ಅವರು ಶಾಸಕ ಕೆ.ಹರೀಶ್‌ಗೌಡ ಅವರಿಗೆ ಮನವಿ ಸಲ್ಲಿಸಿದರು.

ಆರ್‌ಎಂಸಿ ವೃತ್ತದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಶಿಥಿಲವಾಗಿರುವ ಸಮುದಾಯ ಭವನವನ್ನು ಶೀಘ್ರವೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಅಂಧ ಹಾಗೂ ಕಿವುಡ ಮಕ್ಕಳ ಶಾಲೆ ಆವರಣದಲ್ಲಿ ನಿರ್ಮಿಸಿರುವ ಸುವರ್ಣ ಮಹೋತ್ಸವ ಭವನ ನಿರುಪಯೋಗವಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಎಂಎಸ್‌ಐಎಲ್ ಉಗ್ರಾಣ ಶಿಥಿಲಗೊಂಡಿದ್ದು, ಅನಾಹುತವಾಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು ಎಂದು ಕೋರಿದರು.

ಅಲ್ಲದೇ ಲಷ್ಕರ್ ಮೊಹಲ್ಲಾದಲ್ಲಿದ್ದ ಉಚಿತ ಗ್ರಂಥಾಲಯವನ್ನು ಈಗ ಪೌರಕಾರ್ಮಿಕರ ವಿಶ್ರಾಂತಿ ಗೃಹವನ್ನಾಗಿ ಮಾರ್ಪಡಿಸಲಾಗಿದೆ. ಆದರೂ ಅದು ಬಳಕೆಯಾಗದೆ ಪಾಳು ಬಿದ್ದು, ಮೂತ್ರಾಲಯವಾಗಿದೆ. ಚರಂಡಿಗಳಲ್ಲಿ ಹೂಳು ತುಂಬಿದ್ದು, ಕಸ ತುಂಬಿದೆ. ಇದನ್ನು ತೆರವುಗೊಳಿಸುವ ಜೊತೆಗೆ ಕುಡಿಯುವ ನೀರಿನ ಬಡಾವಣೆಯನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.