ಹುಬ್ಬಳ್ಳಿ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಜೋಧಪುರದಲ್ಲಿ ಶನಿವಾರ ಭೇಟಿ ಮಾಡಿದ ನೈಋತ್ಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ, ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.
ಹುಬ್ಬಳ್ಳಿ-ಮುಂಬೈ ಹಾಗೂ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ ಸ್ಲೀಪರ್ ರೈಲು ಪ್ರಾರಂಭಿಸಲು, ಹುಬ್ಬಳ್ಳಿ-ಜೋಧಫುರ ನೇರ ರೈಲು ಸಂಚಾರ ಹಾಗೂ ಹುಬ್ಬಳ್ಳಿ-ಹೈದ್ರಾಬಾದ್ ರೈಲು ಸಂಚಾರ ಮರುಪ್ರಾರಂಭಿಸಲು ಆಗ್ರಹಿಸಿದರು.
ಎಸ್ಎಸ್ಎಸ್ ಹುಬ್ಬಳ್ಳಿ-ವಟವಾ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ಈ ರೈಲು ವಾರಕ್ಕೆ ಒಂದೇ ಬಾರಿಗೆ ಸಂಚರಿಸುತ್ತಿದ್ದು, ಇದು ನಿತ್ಯ ಸಂಚರಿಸುವಂತಾಗಬೇಕು ಎಂದು ಮನವಿ ಮಾಡಿದರು.
ಚೆನೈ-ಜೋಧಪುರ ವಯಾ ಸಮದಡಿ-ಭಿಲಡಿ ರೈಲು ನಿತ್ಯ ಬೆಳಗಿನಜಾವ ಅಗತ್ಯ ಪ್ರಯಾಣಿಕರಿಲ್ಲದೇ ಸಂಚರಿಸುತ್ತಿದ್ದು, ವಾರದಲ್ಲಿ ಮೂರು ದಿನ ಜೋಧಪುರ-ಬೆಂಗಳೂರು ಮಾರ್ಗದಲ್ಲಿ ಹಾಗೂ ಉಳಿದ ದಿನಗಳಲ್ಲಿ ಚೆನೈ ಮಾರ್ಗದಲ್ಲಿ ಚೆನೈ-ಬೆಂಗಳೂರು-ಹುಬ್ಬಳ್ಳಿ-ಮಿರಜ ಮಾರ್ಗವಾಗಿ ಸಂಚರಿಸುವಂತಾಗಬೇಕು. ಇದರಿಂದ ದಕ್ಷಿಣ ಹಾಗೂ ಉತ್ತರ ಭಾರತದ ಪ್ರಯಾಣಿಕರಿಗೆ ಪ್ರಯೋಜನವಾಗುತ್ತದೆ ಎಂದು ಕೋರಿದರು.
ಸಚಿವ ಅಶ್ವಿನಿ ವೈಷ್ಣವ ಅವರು ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.