ಹೂವಿನಹಿಪ್ಪರಗಿ: ರಾಜ್ಯ ಸರ್ಕಾರ ಹೂವಿನಹಿಪ್ಪರಗಿ ಸೇರಿದಂತೆ ಅಖಂಡ ವಿಜಯಪುರ ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸುವಂತೆ ಕ್ರಮ ಕೈಗೊಳ್ಳಲು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಈ ಬಾರಿ ಜಿಲ್ಲಾದ್ಯಂತ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ.
ತೊಗರಿ, ಶೇಂಗಾ, ಈರುಳ್ಳಿ, ಮೆಕ್ಕೆಜೋಳ, ಕಬ್ಬು ಸೇರಿದಂತೆ ಮುಂಗಾರ ಬೆಳೆ ಸಂಪೂರ್ಣ ಹಾಳಾಗಿದೆ. ಇತ್ತೀಚೆಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ಎಲ್ಲೋ ಕುಳಿತು ಸಮೀಕ್ಷೆ ವರದಿ ಪಡೆದಿದ್ದಾರೆ.
ಖುದ್ದಾಗಿ ಜಮೀನುಗಳಿಗೆ ಭೇಟಿ ನೀಡದೆ ಕೇವಲ 5 ತಾಲೂಕುಗಳು ಅಂದರೆ ಮುದ್ದೇಬಿಹಾಳ, ನಿಡಗುಂದಿ, ದೇವರಹಿಪ್ಪರಗಿ, ಬಬಲೇಶ್ವರ ಹಾಗೂ ಚಡಚಣ ಇವುಗಳನ್ನು ಮಾತ್ರ ತೀವ್ರ ಮಳೆ ಕೂರತೆ ತಾಲೂಕುಗಳೆಂದು ಗುರುತಿಸಿ ವರದಿ ಕಳಿಸಲಾಗಿದೆ.
ಈ ವರದಿಯನ್ನು ತಿರಸ್ಕರಿಸಿ ಸರ್ಕಾರ ಮತ್ತೂಮ್ಮೆ ಸಮೀಕ್ಷೆ ನಡೆಸಿ ಅಖಂಡ ಜಿಲ್ಲೆಯನ್ನು ಬರಗಾಲ ಪ್ರದೇಶವೇಂದು ಘೋಷಿಸಬೇಕು. ಬೋರ್‌ವೆಲ್ ಹಾಗೂ ತೆರೆದ ಬಾವಿಯಲ್ಲಿನ ಅಲ್ಪ-ಸ್ವಲ್ಪ ನೀರನ್ನಾದರೂ ಬೆಳೆಗಳಿಗೆ ಪೂರೈಸಲು ವಿದ್ಯುತ್‌ನ್ನೂ ಸರಿಯಾಗಿ ಕೊಡುತ್ತಿಲ್ಲ ಎಂದರು.