ನರಗುಂದ: ಪಕ್ಷಿಗಳ ವಿಹಾರಧಾಮವಾದ ಶಿರಹಟ್ಟಿಯ ಮಾಗಡಿ ಕೆರೆ ಅಭಿವೃದ್ಧಿಪಡಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಸದಸ್ಯರು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
134.15 ಎಕರೆ ವಿಸ್ತೀರ್ಣದ ಈ ಕೆರೆಗೆ ಪ್ರತಿವರ್ಷ ಚಳಿಗಾಲದಲ್ಲಿ ಕಾಶ್ಮೀರ, ಟಿಬೆಟ್, ಮಲೇಷಿಯಾ, ಶ್ರೀಲಂಕಾ ಸೇರಿ ವಿವಿಧ ದೇಶಗಳಿಂದ 130ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಮಾಗಡಿ ಕೆರೆಯನ್ನು ಸಂರಕ್ಷಿತ ಕೆರೆ ಅಭಿವೃದ್ಧಿ ಪ್ರದೇಶವೆಂದು ಗುರುತಿಸಲಾಗಿದೆ. ಕೆರೆಯ ಸುತ್ತ ಪೇವರ್ಸ್, ಗ್ರೀಲ್ ಅಳವಡಿಸಲಾಗಿದೆ. ಆದರೆ, ಕೆರೆಯ ಸುತ್ತಲಿನ ಎಲ್ಲೆಂದರಲ್ಲಿ ಕಸದ ಗಿಡ-ಗಂಟೆ ಬೆಳೆದು ಪ್ಲಾಸ್ಟಿಕ್ ವಸ್ತು ಸಂಗ್ರಹಗಳ ಗಲೀಜು ವಾತಾವರಣ ಕಂಡುಬರುತ್ತಿದೆ. ಪಕ್ಷಿಗಳನ್ನು ಬೀದಿನಾಯಿಗಳು ಬೇಟೆಯಾಡುತ್ತಿವೆ. ಇದೆಲ್ಲಕ್ಕೂ ಕಡಿವಾಣ ಹಾಕಬೇಕು. ಗ್ರಾಪಂ, ಜಿಪಂ, ಅರಣ್ಯ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಲಾಗಿದೆ. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಸಂಗನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಟಾಕಪ್ಪ ಸಾತಪುತೆ, ಪ್ರಧಾನ ಕಾರ್ಯದರ್ಶಿ ರಮೇಶ ಕೋಳಿವಾಡ, ರಾಜಶೇಖರಗೌಡ ಪಾಟೀಲ, ಉಮೇಶಗೌಡ ಪಾಟೀಲ, ಜಗದೀಶ ಸಂಕನಗೌಡ್ರ, ವಿವೇಕ ಮೋರೆ, ಪುಟ್ಟಸ್ವಾಮೀಜಿ, ಗಂಗಾಧರ ಕಾಸರಗಟ್ಟಿ, ಮಲ್ಲನಗೌಡ ಪಾಟೀಲ, ನಾಗರಾಜ ಅಪ್ರೋಜಿ, ದೇವರಾಜ ದೇಸಾಯಿ, ವಿಠಲ ಮುಧೋಳೆ, ಅಜಯ ಕರಿಗೌಡ್ರ, ಬಸನಗೌಡ ಪಾಟೀಲ, ಈರಣ್ಣ ಹಂಚಿನಾಳ, ಶಂಕರಗೌಡ ಪಾಟೀಲ, ರವಿಕುಮಾರ ಮ್ಯಾಗೇರಿ, ವೆಂಕಟೇಶ ದೋಂಗಡೆ, ರವಿ ಹಡಪದ, ಮುತ್ತು ಯಲಿಗಾರ, ಇದ್ದರು.