ಜಿಲ್ಲೆ

ನಾಪತ್ತೆಯಾದವರ ಪತ್ತೆ ಕಾರ್ಯ ಮುಂದುವರಿಸಲು ಮನವಿ

Gadag - Desk - Tippanna Avadoot

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಗುಡ್ಡಕುಸಿತದಲ್ಲಿ ಸಿಲುಕಿದವರ ಪತ್ತೆ ಕಾರ್ಯಾಚರಣೆ ಮುಂದುವರಿಸಲು ಮತ್ತು ನಾಪತ್ತೆಯಾದವರಿಗೆ ಹೆಚ್ಚಿನ ಸೂಕ್ತ ಪರಿಹಾರ ನೀಡಬೇಕು ಎಂದು ಭಟ್ಕಳ ನಾಮಧಾರಿ ಸಮಾಜದ ಮುಖಂಡರು ಭಟ್ಕಳ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಗುಡ್ಡಕುಸಿತದ ದುರ್ಘಟನೆಯಲ್ಲಿ ಅನೇಕರು ಸಾವನ್ನಪ್ಪಿದ್ದು, ಸಾವು-ನೋವು ಸಂಭವಿಸಿದವರ ಕುಟುಂಬವು ದುಃಖದ ಮಡುವಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಅದರಲ್ಲಿ ಕೆಲವರ ಶವ ಸಿಕ್ಕಿರುತ್ತದೆ. ಆದರೆ, ನಾಮಧಾರಿ ಸಮಾಜದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಶಿರೂರು ಅಂಕೋಲಾ ಎನ್ನುವವರು ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದು ಇನ್ನೂ ಪತ್ತೆಯಾಗಿಲ್ಲ. ಈ ದುರ್ಘಟನೆಗೆ ಐಆರ್​ಬಿ ಕಂಪನಿಯ ಅವೈಜ್ಞಾನಿಕ ಮತ್ತು ಅನಿಯೋಜಿತ ರಸ್ತೆ ಕಾಮಗಾರಿಯೇ ಕಾರಣವಾಗಿದೆ. ಈಗಾಗಲೇ ಅಧಿಕಾರಿಗಳು ಪತ್ತೆ ಕಾರ್ಯಾಚರಣೆ ನಿಲ್ಲಿಸಿದ್ದು ನೊಂದ ಮನೆಯವರಿಗೆ ಮತ್ತು ನಾಮಧಾರಿ ಸಮಾಜದವರಿಗೆ ನೋವುಂಟಾಗಿದೆ. ಹೀಗಾಗಿ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈ ಕೂಡಲೇ ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆ ಮುಂದುವರಿಸಲು ಸಂಬಂಧಿಸಿದ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡುವುದರೊಂದಿಗೆ ನೊಂದ ಕುಟುಂಬಕ್ಕೆ ಇನ್ನೂ ಹೆಚ್ಚಿನ ಸೂಕ್ತ ಪರಿಹಾರ ನೀಡಲು ಆದೇಶಿಸಬೇಕು ಹಾಗೂ ಜನರ ಜೀವದ ಜೊತೆ ಚಲ್ಲಾಟ ಆಡಿದ ಐಆರ್​ಬಿ ಕಂಪೆನಿಯ ವಿರುದ್ಧ ಸೂಕ್ತ ತನಿಕೆಗೆ ಆಗ್ರಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಸಾರದಹೊಳೆ ಹೋಬಳಿಯ ನಾಮಧಾರಿ ಸಮಾಜ ಅಧ್ಯಕ್ಷ ಆರ್.ಕೆ. ನಾಯ್ಕ, ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಅಶೋಕ ಭಟ್ ಮನವಿ ಸ್ವೀಕರಿಸಿದರು.

ನಾಮಧಾರಿ ಸಮಾಜ ಅಧ್ಯಕ್ಷ ಅರುಣ ನಾಯ್ಕ, ಉಪಾಧ್ಯಕ್ಷ ಎಂ.ಕೆ. ನಾಯ್ಕ.ಗೋವಿಂದ ನಾಯ್ಕ, ಸಾರದಹೊಳೆ ಹೋಬಳಿಯ ಪ್ರಧಾನ ಕಾರ್ಯದರ್ಶಿ ವಾಸು ನಾಯ್ಕ , ಭಟ್ಕಳ ನಾಮಧಾರಿ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಎಲ್. ನಾಯ್ಕ, ಎಂ.ಆರ್. ನಾಯ್ಕ, ಭವಾನಿಶಂಕರ, ಗಿರೀಶ ನಾಯ್ಕ ಸಾರದಹೊಳೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ ಹಾಗೂ ನಾಮಧಾರಿ ಎರಡು ಹೋಬಳಿಯ ಮುಖಂಡರು ಉಪಸ್ಥಿತರಿದ್ದರು.