ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಜಿ. ರಾಮನಾರಾಯಣ ಜೋಷಿ ಭೇಟಿ ಮಾಡಿದರು. 
ಜಿಲ್ಲೆ

ಖುಲ್ಲಾ ಸ್ಥಗಿತಗೊಳಿಸಲು ಸಿಎಂಗೆ ಮೊರೆ

ಎಸ್.ಎನ್.ರವೀಂದ್ರ

ಕಳಸ: ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯು ಕಾಫಿ ತೋಟಗಳಲ್ಲಿ ಗಿಡ ಕಡಿದು ಒತ್ತುವರಿ ಖುಲ್ಲಾ ಮಾಡುತ್ತಿರುವುದನ್ನು ಸ್ಥಗಿತಗೊಳಿಸಬೇಕೆಂದು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಜಿ.ರಾಮನಾರಾಯಣ ಜೋಷಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.

ಸೋಮವಾರ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಮಾತನಾಡಿದ ಅವರು, ಅರಣ್ಯ ಇಲಾಖೆ ಕಾಫಿ ತೋಟಗಳ ಒತ್ತುವರಿ ಖುಲ್ಲಾ ಮಾಡುತ್ತಿರುವುದರಿಂದ ಮೂರೂ ಜಿಲ್ಲೆಗಳ ಕೃಷಿಕರು ಆತಂಕದಲ್ಲಿದ್ದಾರೆ. ಅನೇಕ ವರ್ಷಗಳಿಂದ ರೈತರು ಕಷ್ಟಪಟ್ಟು ಬೆಳೆಸಿದ ಗಿಡಗಳನ್ನು ಅರಣ್ಯ ಇಲಾಖೆ ಕಡಿದುಹಾಕುತ್ತಿರುವುದು ಸರಿಯಲ್ಲ. ದೇಶಕ್ಕೆ ವಿದೇಶಿ ವಿನಿಮಯ ನೀಡುತ್ತಿರುವ ಕಾಫಿ ಉದ್ಯಮದ ಬಗ್ಗೆ ಎಚ್ಚರಿಕೆ ಕ್ರಮ ಅಗತ್ಯ ಎಂದು ತಿಳಿಸಿದರು. ಸಿದ್ದರಾಮಯ್ಯ ಮಾತನಾಡಿ, ಸಂಬಂಧಪಟ್ಟವರ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.