ಮಂಡ್ಯ: ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಕೆಆರ್‌ಎಸ್ ಅಣೆಕಟ್ಟೆಗೆ ಧಕ್ಕೆ ತರುವಂತಹ 3 ಸಾವಿರ ಕೋಟಿ ರೂ ಯೋಜನೆಯ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ, ಹಿನ್ನೀರಿನಲ್ಲಿ ವಿಮಾನಯಾನ ಕ್ರೀಡಾ ಯೋಜನೆ, ಕಾವೇರಿ ಆರತಿ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಗ್ರಹಿಸಿದರು.
ಇತ್ತೀಚೆಗೆ ಕಾರ್ಖಾನೆ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮನವಿ ಸಲ್ಲಿಸಿರುವ ಸಮಿತಿಯ ಪದಾಧಿಕಾರಿಗಳು, ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಗೆ ಸಂಬಂಧಿಸಿದಂತೆ ಕರೆದಿರುವ ಟೆಂಡರ್ ರದ್ದುಪಡಿಸಬೇಕು. ಡ್ಯಾಂ ಸುರಕ್ಷತೆ ಕಾಯ್ದೆ ಅನ್ವಯ ಅಣೆಕಟ್ಟು ಪ್ರದೇಶಗಳು ಪೂರ್ಣ ನಿಷೇಧಿತ ಪ್ರದೇಶವಾಗಿರುವ ಕಾರಣ ಜನಸಂಪಪರ್ಕ ಯೋಜನೆ ಮಾಡಬಾರದು ಎಂದು ಅಣೆಕಟ್ಟು ವ್ಯಾಪ್ತಿಯ ಗ್ರಾಪಂಗಳು ನಿರ್ಣಯ ಕೈಗೊಂಡಿರುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರವಾಸಿ ಕ್ಷೇತ್ರವಾಗಿರುವುದರಿಂದ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಪದಾಧಿಕಾರಿಗಳು, ಅಣೆಕಟ್ಟು ಇರುವ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡಿರುವುದು ಸರಿಯಲ್ಲ. ಕಾವೇರಿ ನೀರು ಹರಿಯುವ ಬೇರೆ ಎಲ್ಲಿಯಾದರೂ ಮಾಡಿಕೊಳ್ಳುವಂತೆ ಒತ್ತಾಯಿಸಿ ಕಾವೇರಿ ಆರತಿ ಬೇಡವೇ ಬೇಡ, ಅಮ್ಯೂಸ್‌ಮೆಂಟ್ ಪಾರ್ಕ್ ಬೇಡವೇ ಬೇಡ. ಕೆಆರ್‌ಎಸ್ ಉಳಿಸಿ, ಮೈಷುಗರ್ ಮುನ್ನಡೆಸಿ ಎಂದು ಘೋಷಣೆ ಕೂಗಿದರು.
ಇನ್ನು ಮೈಷುಗರ್ ಕಾರ್ಖಾನೆಯನ್ನು ಜೂನ್ ತಿಂಗಳಲ್ಲೇ ಪ್ರಾರಂಭಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ 10 ಲಕ್ಷ ಟನ್ ಕಬ್ಬು ಲಭ್ಯವಿದೆ. ಈ ಪೈಕಿ 5 ಲಕ್ಷ ಟನ್ ಕಬ್ಬು ಒಪ್ಪಿಗೆಯಾಗಿದೆ. ಕಳೆದ ಡಿ.24ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಜೂನ್ ಮೊದಲ ವಾರದಲ್ಲಿ ಕಾರ್ಖಾನೆ ಆರಂಭಿಸಲು ತೀರ್ಮಾನಿಸಲಾಗಿತ್ತು. ಈ ಮಧ್ಯೆ ಏಪ್ರಿಲ್‌ನಲ್ಲಿ ಕಾರ್ಖಾನೆ ಅಧ್ಯಕ್ಷರು ರೈತರೊಂದಿಗೆ ಸಭೆ ನಡೆಸಿ ಜೂನ್ ಕೊನೆಯ ಭಾಗದಲ್ಲಿ ಪ್ರಾರಂಭ ಮಾಡುವುದಾಗಿ ಹೇಳುತ್ತಿದ್ದಾರೆ. ಇದು ಶೋಚನೀಯ ವಿಷಯ ಎಂದರು.
ಪ್ರಸಕ್ತ ಸಾಲಿನಲ್ಲಿ 4 ರಿಂದ 5 ಲಕ್ಷ ಟನ್ ಕಬ್ಬು ಅರೆಯುತ್ತೇವೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಕಾರ್ಖಾನೆ ನಿಲ್ಲಿಸುತ್ತೇವೆ ಎಂದು ಹೇಳಲಾಗುತ್ತಿದೆ. ಇದು ರೈತರಿಗೆ ಆತಂಕಕಾರಿ ವಿಷಯವಾಗಿದೆ. ಪ್ರಸ್ತುತ ಕಾರ್ಖಾನೆಯನ್ನು ಆರಂಭಿಸುವ ಯಾವುದೇ ಸೂಚನೆಯೂ ಕಂಡುಬರುತ್ತಿಲ್ಲ. ಸರ್ಕಾರಕ್ಕೆ ಸಕ್ಕರೆ ಕಾರ್ಖಾನೆಯೇ ಮೊದಲ ಆದ್ಯತೆ, ಪ್ರಮುಖ ವಿಷಯವಾಗಬೇಕು ಎಂದು ಒತ್ತಾಯಿಸಿದರು.
ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಚಾಲಕಿ ಸುನಂದಾ ಜಯರಾಂ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಎಚ್.ಸಿ.ಮಂಜುನಾಥ, ಟಿ.ಎಲ್.ಕೃಷ್ಣೇಗೌಡ, ಸಿ.ಕುಮಾರಿ ಇತರರಿದ್ದರು.