ಜಿಲ್ಲೆ

ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಸಿಎಂಗೆ ಮನವಿ

ಮಡಿಕೇರಿ: ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕೆಂದು ಒತ್ತಾಯಿಸಿ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್‌ರವರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಇತ್ತೀಚೆಗೆ ಮನವಿ ಪತ್ರ ಸಲ್ಲಿಸಿದರು.


ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ರಾಜ್ಯ ಪಿಂಚಣಿ ಯೋಜನೆ ಎನ್‌ಪಿಎಸ್ ಸಂಬಂಧಿತ ಸಂಘಟನೆಗಳ ಸಭೆಯಲ್ಲಿ ಪಾಲ್ಗೊಂಡ ಅವರು ಪಿಂಚಣಿ ಯೋಜನೆಯ ಸಾಧಕ ಬಾಧಕಗಳ ಕುರಿತು ವಿವರಿಸಿದರು.


ಹಳೆಯ ಪಿಂಚಣಿ ಯೋಜನೆಯನ್ನು ೨೦೦೬ ಏ.೧ ರಂದು ಅಂದಿನ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ರದ್ದು ಮಾಡಿತು. ೨೦೦೬ ಮಾ.೩೧ಕ್ಕಿಂತ ಮೊದಲು ನೇಮಕಾತಿಯಾದ ಖಾಸಗಿ ಅನುದಾನಿತ ಶಿಕ್ಷಕರಿಗೆ ಹಳೆಯ ಪಿಂಚಣಿ ಯೋಜನೆ ಈಗಲೂ ಅನ್ವಯವಾಗುತ್ತಿದೆ. ಆದರೆ ೨೦೦೬ ಏ.೧ರ ನಂತರ ಅನುಮೋದನೆ ಪಡೆದವರಿಗೆ ಹಳೆಯ ಪಿಂಚಣಿ ಯೋಜನೆ ರದ್ದಾಗಿದ್ದು, ಹೊಸ ಪಿಂಚಣಿ ಯೋಜನೆ ಕೂಡ ಅನ್ವಯವಾಗದೇ ಇರುವುದು ದೊಡ್ಡ ದುರಂತ ಎಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಂಜುನಾಥ್ ಕುಮಾರ್ ಅಭಿಪ್ರಾಯ ಹಂಚಿಕೊಂಡರು.


ಸರ್ಕಾರಿ ಎನ್‌ಪಿಎಸ್ ನೌಕರರ ಭತ್ಯೆ ಶೇ.೧೦, ಸರ್ಕಾರದ ವಂತಿಗೆ ಶೇ.೧೪ರಷ್ಟು ಮತ್ತು ಶೇ.೨೪ ಮೊತ್ತವನ್ನು ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ಶೇರು ಮಾರುಕಟ್ಟೆಗೆ ಹಾಕಲಾಗುತ್ತದೆ. ಅದರಲ್ಲಿ ಎಸ್‌ಬಿಐ ಶೇ.೪೦ ರಷ್ಟು, ಯುಟಿಐ ಶೇ.೧೭, ಎಲ್‌ಐಸಿಗೆ ಶೇ.೪೬ ರಷ್ಟು ಹಣವನ್ನು ವಿನಿಯೋಗಿಸಿದ್ದು, ಕೇಂದ್ರ ಸರ್ಕಾರ ಆ ಹಣವನ್ನು ಮರುಪಾವತಿಸಬೇಕು ಮತ್ತು ಎನ್‌ಪಿಎಸ್ ಪದ್ಧತಿ ರದ್ದು ಮಾಡಬೇಕು ಎಂದು ಮನವಿ ಮಾಡಿದರು.


ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಕುಮಾರ್ ಎನ್‌ಪಿಎಸ್ ರದ್ದು ಮತ್ತು ಒಪಿಎಸ್ ಮರು ಜಾರಿ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿರುವುದಾಗಿ ತಿಳಿಸಿದರು.