ಡಾ.ಸಿ.ಎನ್. ಮಂಜುನಾಥ್, ನಿರ್ದೇಶಕ, ಜಯದೇವ ಹೃದ್ರೋಗ ಆಸ್ಪತ್ರೆ 
ಜಿಲ್ಲೆ

ಉತ್ತರ ಕರ್ನಾಟಕ ಭಾಗಕ್ಕೆ ಏಮ್ಸ್ ಮಂಜೂರಿಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ: ಸಂಸದ ಡಾ.ಸಿ.ಎನ್.ಮಂಜುನಾಥ್

ಮೈಸೂರು: ಉತ್ತರ ಕರ್ನಾಟಕ ಭಾಗಕ್ಕೆ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ , ಏಮ್ಸ್ (ಎಐಐಎಂಎಸ್) ಮಂಜೂರು ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ನಡ್ಡಾ ಅವರಿಗೆ ಮನವಿ ಸಲ್ಲಿಸಿರುವುದಾಗಿ ಸಂಸದ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರಕ್ಕೆ ಇತ್ತೀಚೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಈಗಾಗಲೇ 20 ಎಐಐಎಂಎಸ್ ಶಿಕ್ಷಣ ಸಂಸ್ಥೆಗಳಿವೆ. 5 ಸಂಸ್ಥೆ ಕಾಮಗಾರಿ ಪ್ರಗತಿಯಲ್ಲಿದೆ. ಕರ್ನಾಟಕ ಮತ್ತು ಕೇರಳದಲ್ಲಿ ಏಮ್ಸ್ ಸಂಸ್ಥೆ ಆಗಬೇಕಾಗಿದೆ. ನಾನು ಸೇರಿದಂತೆ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ಬ್ರಿಜೇಶ್ ಚೌಟಾ, ಪ್ರಭಾ ಮಲ್ಲಿಕಾರ್ಜುನ, ಜಿ. ಕುಮಾರ್ ನಾಯಕ್ ಇತರರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.
ಒಂದು ಏಮ್ಸ್ ಸ್ಥಾಪನೆಗೆ 1,500 ಕೋಟಿ ರೂ. ಬೇಕಾಗುತ್ತದೆ. ಬೆಂಗಳೂರು ನಿಮ್ಹಾನ್ಸ್ ಆವರಣದಲ್ಲಿ ಪಾಲಿ ಟ್ರಾಮಾ ಕೇರ್ ಸೆಂಟರ್‌ಗೆ ಅನುಮೋದನೆ, ರಾಜ್ಯದ ಎಕ್ಸ್‌ಪ್ರೆಸ್ ಹೈವೇ ಗಳಲ್ಲಿ 125 ಕಿ.ಮೀ.ಗೆ ಒಂದು ಪಾಲಿಟ್ರಾಮಾ ಕ್ಲಿನಿಕ್ ಸ್ಥಾಪಿಸಲು ಮನವಿ ಮಾಡಿದ್ದೇವೆ. ಈ ಎಲ್ಲ ಬೇಡಿಕೆಗಳಿಗೂ ಆರೋಗ್ಯ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಗಳೂರು ಮೆಟ್ರೋ 3ನೇ ಫೇಸ್‌ಗೆ 15,140 ಕೋಟಿ ರೂ. ಅನುಮೋದನೆ ದೊರೆತಿದೆ ಎಂದು ತಿಳಿಸಿದರು.
ವೈದ್ಯರಾದ ಡಾ. ಜೆ.ಬಿ. ನರೇಂದ್ರ, ಆಪ್ತ ಸಹಾಯಕ ಪರಮೇಶ್, ಅವಿನಾಶ್ ಕೆಸ್ತೂರ್ ಇದ್ದರು.